ಯೋಧರ ಶವದ ಮೇಲೆ ಕುಳಿತು ಚುನಾವಣಾ ತಂತ್ರಗಾರಿಕೆ ಹೆಣೆಯುವ ಬಿಜೆಪಿ: ಕಾಂಗ್ರೆಸ್ ಟೀಕೆ

Update: 2021-04-05 14:08 GMT

ಬೆಂಗಳೂರು, ಎ.5: ಆತ್ಮೀಯ ರಾಜ್ಯ ಬಿಜೆಪಿ, ಗೃಹ ಸಚಿವ ಅಮಿತ್ ಶಾ ಅವರಿಗೆ ತಮ್ಮ ಮಗನನ್ನು ಕ್ರಿಕೆಟ್ ಬೋರ್ಡ್ ನಲ್ಲಿ ಕೂರಿಸುವ ಹಾಗೂ ಆಸ್ತಿ ಡಬಲ್ ಮಾಡುವ ಆಸಕ್ತಿಯನ್ನು ದೇಶದ ಭದ್ರತೆ ಬಗ್ಗೆ ವಹಿಸಿದ್ದರೆ ಈ ಸ್ಥಿತಿ ಬರುತ್ತಿತ್ತೇ? ನೋಟ್ ಬ್ಯಾನ್ ನಕ್ಸಲ್ ಚಟುವಟಿಕೆ ನಿಲ್ಲಿಸುವ ಮಾಸ್ಟರ್ ಸ್ಟ್ರೋಕ್ ಎಂದಿದ್ದರಲ್ಲ, ಅದು ಸುಳ್ಳೇ? ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂಬಂಧ ಟ್ವಿಟ್ ಮಾಡಿರುವ ಕಾಂಗ್ರೆಸ್, ಪುಲ್ವಾಮ ದಾಳಿಗೆ ಸಂಭ್ರಮಿಸಿದ ದೇಶದ್ರೋಹಿ ಅರ್ನಾಬ್ ಗೋಸ್ವಾಮಿಯನ್ನು ಬೆಂಬಲಿಸಿದ್ದ ರಾಜ್ಯ ಬಿಜೆಪಿ, ಉಗ್ರ ಹಫೀಝ್ ಸಯೀದ್‍ನನ್ನು ಆರೆಸ್ಸೆಸ್‍ನ ವೇದ್ ಪ್ರತಾಪ್ ಭೇಟಿಯಾಗಿದ್ದೇಕೆ? ನರೇಂದ್ರ ಮೋದಿ ಆಡಳಿತದಲ್ಲಿ ಯೋಧರ ಸಾವಿನ ಸಂಖ್ಯೆ ಹೆಚ್ಚಿದ್ದೇಕೆ? ಯೋಧರ ಶವದ ಮೇಲೆ ಕುಳಿತು ಚುನಾವಣಾ ತಂತ್ರಗಾರಿಕೆ ಹೆಣೆಯುವ ನಿಮ್ಮ ತಂತ್ರ ದೇಶಕ್ಕೆ ತಿಳಿದಿದೆ ಎಂದು ಕಿಡಿಗಾರಿದೆ.

‘ಸಿಡಿ ಇಟ್ಟುಕೊಂಡು ಮುಖ್ಯಮಂತ್ರಿಯನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಬಿಜೆಪಿಯವರು’ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಆರೋಪಿಸುತ್ತಿದ್ದಾರೆ. ಸಿಎಂ ಬ್ಲಾಕ್ಮೇಲ್‍ಗೆ ಒಳಪಟ್ಟರೆ ಭ್ರಷ್ಟಾಚಾರ, ಅರಾಜಕತೆ, ಅಧಿಕಾರ ದುರುಪಯೋಗ ಮುಂತಾದವುಗಳಿಗೆ ಅವಕಾಶವಾಗುವ ಸಾಧ್ಯತೆ ಇದೆ. ಈ ಬಗ್ಗೆ ಗಂಭೀರವಾಗಿ ಉನ್ನತ ಮಟ್ಟದ ತನಿಖೆಯಾಗುವ ಅಗತ್ಯವಿದೆ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ರಾಜ್ಯ ಬಿಜೆಪಿ ನೀವು ವಿರೋಧ ಪಕ್ಷಗಳ ನಾಯಕರ ಹೆಸರುಗಳನ್ನು ಅನಗತ್ಯವಾಗಿ ಪ್ರಸ್ತಾಪಿಸಿ ಪ್ರಕರಣವನ್ನು ಮುಚ್ಚಿಕೊಳ್ಳಬಹುದು ಎಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ. ಕಾನೂನು ಗಟ್ಟಿ ಇದೆ, ಅದನ್ನು ಬಳಸುತ್ತಿರುವ ಕೈಗಳು ಭ್ರಷ್ಟಾಚಾರದ್ದಾಗಿದೆ ಅಷ್ಟೇ. ಇಂತಹ ನವರಂಗಿ ನಾಟಕ ಬಿಟ್ಟು ಆರೋಪಿಯನ್ನು ಬಂಧಿಸುವುದು ಯಾವಾಗ ಹೇಳಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News