ಗುಂಪು ಥಳಿತ ತಡೆಯಲು ಸುಪ್ರೀಂಕೋರ್ಟ್ ಆದೇಶ ಕೂಡಲೇ ಪಾಲಿಸಿ: ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ವಿದ್ಯಾ ದಿನಕರ್
ಮಂಗಳೂರು, ಎ 5: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರ ವ್ಯಾಪ್ತಿಯಲ್ಲಿ ಗುಂಪು ಥಳಿತ, ಕೋಮು ಹಿಂಸೆ ಹಾಗು ಗೋರಕ್ಷಕರ ದಾಳಿಗಳು ನಡೆಯದಂತೆ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಯನ್ನು ಕೂಡಲೇ ಜಿಲ್ಲಾಡಳಿತ ಹಾಗು ಮಂಗಳೂರು ಪೊಲೀಸ್ ಕಮಿಷನರೇಟ್ ಜಾರಿಗೆ ತರಬೇಕು ಎಂದು ಕಾರವಾನ್ ಎ ಮೊಹಬ್ಬತ್ ಸಂಘಟನೆ ಆಗ್ರಹಿಸಿದೆ.
ತೆಹಸೀನ್ ಪೂನಾವಾಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟ ಆದೇಶ ನೀಡಿದ್ದು ಅದನ್ನು ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಅನುಷ್ಠಾನಕ್ಕೆ ತರಬೇಕು ಎಂದು ಸಂಘಟನೆಯ ವಿದ್ಯಾ ದಿನಕರ್ ಅವರು ಮಂಗಳೂರು ಪೊಲೀಸ್ ಕಮಿಷನರ್ ಶಶಿ ಕುಮಾರ್ ಅವರಿಗೆ ಸೋಮವಾರ ನೀಡಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಲವ್ ಜಿಹಾದ್ ಹಾಗು ಅಕ್ರಮ ಗೋ ಸಾಗಾಟ ತಡೆಯುವ ಹೆಸರಿನಲ್ಲಿ ರಾಜಕೀಯ ಬೆಂಬಲಿತ ಸಂಘಟನೆಗಳ ಗೂಂಡಾಗಳು ಅಮಾಯಕರ ಮೇಲೆ ದಾಳಿ ಮಾಡುತ್ತಿದ್ದಾರೆ. ಪ್ರಚೋದನಕಾರಿ ಭಾಷಣ, ಹೇಳಿಕೆಗಳು, ಮಾರಕ ಹಲ್ಲೆ, ಕಿರುಕುಳ, ಸಾರ್ವಜನಿಕ ಅವಹೇಳನಗಳ ಮೂಲಕ ಜನರ ವಿಶೇಷವಾಗಿ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಈ ದಾಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈಭವೀಕರಿಸಿ ಭಯ ಹಾಗು ಅಪನಂಬಿಕೆ ಹರಡಲಾಗುತ್ತಿದೆ. ಕೆಲವು ಸಮಯ ಶಾಂತವಾಗಿದ್ದ ಜಿಲ್ಲೆಯಲ್ಲಿ ಮತ್ತೆ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವಿದ್ಯಾ ದೂರಿದ್ದಾರೆ.
ಈ ದಾಳಿಗಳನ್ನು ತಡೆಯಲು ಸುಪ್ರೀಂ ಕೋರ್ಟ್ ಈಗಾಗಲೇ ನೀಡಿರುವ ಆದೇಶ ಹಾಗು ಮಾರ್ಗಸೂಚಿಯನ್ನು ಅನುಷ್ಠಾನಕ್ಕೆ ತರಬೇಕೆಂದು ಈಗಾಗಲೇ ಹಲವು ಬಾರಿ ಮನವಿ ಮಾಡಿ ಪ್ರಯೋಜನವಾಗಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳೂ ಪ್ರಚೋದನಕಾರಿ ಭಾಷಣ, ಹೇಳಿಕೆ ನೀಡುತ್ತಿದ್ದಾರೆ. ಕಾನೂನು ಕೈಗೆತ್ತಿಕೊಳ್ಳುವ ಮಾತಾಡುತ್ತಿದ್ದಾರೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಈಗಲಾದರೂ ಈ ಬಗ್ಗೆ ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅವರ ಮನವಿಯ ಪ್ರತಿ ಇಲ್ಲಿದೆ: