ಅಶ್ಲೀಲ ಸಿಡಿ ಪ್ರಕರಣ: ವಿಚಾರಣೆ ದಿನವೇ ರಮೇಶ್ ಜಾರಕಿಹೊಳಿ ಆಸ್ಪತ್ರೆಗೆ ದಾಖಲು

Update: 2021-04-05 16:34 GMT

ಬೆಂಗಳೂರು, ಎ.5: ಅಶ್ಲೀಲ ಸಿಡಿ ಪ್ರಕರಣ ದಿನೆ ದಿನೆ ತಿರುವು ಪಡೆದುಕೊಳ್ಳುತ್ತಿದ್ದು, ಪ್ರಮುಖ ಆರೋಪ ಹೊತ್ತಿರುವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಸಿಟ್(ವಿಶೇಷ ತನಿಖಾ ದಳ) ಕರೆದಿದ್ದ ವಿಚಾರಣೆ ದಿನವೇ ಆಸ್ಪತ್ರೆಗೆ ದಾಖಲಾಗಿರುವುದು ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ.

ಸಿಡಿ ಪ್ರಕರಣ ಸಂಬಂಧ ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗುವಂತೆ ಸಿಟ್ ತನಿಖಾಧಿಕಾರಿಗಳು ರಮೇಶ್ ಜಾರಕಿಹೊಳಿ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು. ಆದರೆ, ಅವರು ವಿಚಾರಣೆಗೆ ಗೈರಾಗಿದ್ದು, ಕೋವಿಡ್ ಸೋಂಕು ಪರಿಣಾಮ ಇಲ್ಲಿನ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರವೀಂದ್ರ ಆಂಟಿನ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆಗಳಿದ್ದ ಕಾರಣ ಮಾ.31ಕ್ಕೆ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಆಂಟಿಜನ್ ಪರೀಕ್ಷೆ ಮಾಡಿದಾಗ ಅವರಿಗೆ ಸೋಂಕು ಇರುವುದು ದೃಢಪಟ್ಟಿತ್ತು.

ಪ್ರಾಥಮಿಕ ಚಿಕಿತ್ಸೆ ನೀಡಿ ಹೋಮ್ ಕ್ವಾರಂಟೈನ್‍ನಲ್ಲಿರಲು ಕಳುಹಿಸಲಾಗಿತ್ತು. ಆದರೆ, ಅವರಿಗೆ ಉಸಿರಾಟದ ಸಮಸ್ಯೆ ಇದ್ದುದರಿಂದ ನಿನ್ನೆ ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಮೇಶ್ ಅವರಿಗೆ ರಕ್ತದೊತ್ತಡ ಮತ್ತು ಮಧುಮೇಹದ ಅಂಶ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತೀವ್ರ ನಿಗಾಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದರು.

ರಮೇಶ್ ಜಾರಕಿಹೊಳಿ ಅವರು ಮಹಾರಾಷ್ಟ್ರ ಹಾಗೂ ಬೆಂಗಳೂರಿನಲ್ಲಿ ಪ್ರವಾಸ ಮಾಡಿದ್ದಾಗಿ ಹೇಳಿಕೊಂಡಿದ್ದರು. ಅಲ್ಲೆಲ್ಲ ಕೊರೋನ ಸೋಂಕು ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ಪರೀಕ್ಷೆ ನಡೆಸಿದ್ದು, ಕೋವಿಡ್ ದೃಢಪಟ್ಟಿದೆ. ಅವರನ್ನು ಇನ್ನೂ ಮೂರ್ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಆ ಬಳಿಕ ಪರಿಸ್ಥಿತಿಯನ್ನು ನೋಡಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಮತ್ತಿಬ್ಬರಿಗೆ ಸೋಂಕು: ಶಾಸಕ ರಮೇಶ್ ಜಾರಕಿಹೊಳಿಗೆ ಕೋವಿಡ್ ಸೋಂಕು ದೃಢಪಟ್ಟ ಬೆನ್ನಲ್ಲೇ ಅವರ ಸಂಪರ್ಕದಲ್ಲಿದ್ದ ಕಾರು ಚಾಲಕ, ಅಡುಗೆ ಭಟ್ಟನಿಗೂ ಸೋಂಕು ತಗುಲಿದ್ದು, ಈ ಇಬ್ಬರು ಹೋಮ್ ಐಸೋಲೇಷನ್‍ನಲ್ಲಿದ್ದಾರೆ ಎಂದು ಸ್ಥಳೀಯ ವೈದ್ಯರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News