ಪ್ರತಿಷ್ಠಿತ 'ಬೋಧಿವೃಕ್ಷ ಪ್ರಶಸ್ತಿ'ಗೆ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಆಯ್ಕೆ

Update: 2021-04-05 16:50 GMT
Photo: psainath.org

ಬೆಂಗಳೂರು, ಎ. 5: ‘ಸ್ಫೂರ್ತಿಧಾಮ' ನೀಡುವ ಪ್ರತಿಷ್ಠಿತ ‘ಬೋಧಿವೃಕ್ಷ ರಾಷ್ಟ್ರ ಪ್ರಶಸ್ತಿ'ಗೆ ದಿ ಡೈಲಿ, ಬ್ಲಿಟ್ಜ್ ಪತ್ರಿಕೆಯ ಮಾಜಿ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಫೂರ್ತಿಧಾಮ ಅಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಮರಿಸ್ವಾಮಿ ತಿಳಿಸಿದ್ದಾರೆ.

ಪಶ್ರಸ್ತಿಯು 1 ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸ್ಫೂರ್ತಿಧಾಮವು ತಳಸ್ತರದವರ ಅಭಿವೃದ್ಧಿ ಮತ್ತು ಏಳ್ಗೆಗಾಗಿ ದುಡಿದವರನ್ನು ಗುರುತಿಸಿ, ಗೌರವಿಸುವ ಸಲುವಾಗಿ ‘ಬೋಧಿವೃಕ್ಷ' ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಎ.14ರಂದು ನಡೆಯಲಿರುವ ‘ಡಾ.ಬಿ.ಅರ್.ಅಂಬೇಡ್ಕರ್ ಹಬ್ಬ' ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಸ್ಫೂರ್ತಿಧಾಮ ನೀಡುವ ಮತ್ತೊಂದು ಪ್ರತಿಷ್ಠಿತ ‘ಬೋಧಿವರ್ಧನ ಪ್ರಶಸ್ತಿ'ಗೆ ಶಾಹೀನ್ ಬಾಗ್ ದಾದಿಯೆಂದೇ ಹೆಸರಾದ ಬಿಲ್ಕಿಸ್ ಬಾನೋ, ರೈತ ಮುಖಂಡ ಜೆ.ಎಂ.ವೀರಸಂಗಯ್ಯ, ದಸಂಸ (ಸಂಯೋಜಕ) ರಾಜ್ಯಾಧ್ಯಕ್ಷ ವಿ.ನಾಗರಾಜ, ಅಲೆಮಾರಿ, ಕೂಲಿ ಕಾರ್ಮಿಕರಿಗೆ ಸಮುದಾಯಗಳಿಗೆ ಮೂಲಸೌಲಭ್ಯ ಕಲ್ಪಿಸಲು ಹೋರಾಡುತ್ತಿರುವ ಶಾರದಾ ಮಾಳಗಿ, 800 ಮಂದಿ ಕೋವಿಡ್ ಸೋಂಕಿತರ ಅಂತ್ಯಕ್ರಿಯೆ ಮಾಡಿರುವ ‘ಮರಿ ಏಂಜೆಲ್ಸ್' ಸ್ವಯಂ ಸೇವಕರ ಗುಂಪನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 20 ಸಾವಿರ ರೂ.ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

‘ಅಧಿಕಾರ ರಾಜಕಾರಣದಲ್ಲಿ ಚಳವಳಿಗಾರರ ಪಾಲ್ಗೊಳ್ಳುವಿಕೆ ಮತ್ತು ಯಶಸ್ಸಿನ ಸಾಧ್ಯತೆ, ರಾಷ್ಟ್ರ ಪ್ರಭುತ್ವ-ಜಾತೀಯ ಹಿಂಸೆ/ಅವಮಾನದ ಹೊಸರೂಪ, ಅಲೆಮಾರಿ, ಬುಡಕಟ್ಟು ಮತ್ತು ಇತರ ದಮನಿತ ಸಮುದಾಯಗಳ ಅಸ್ತಿತ್ವ ಮತ್ತು ಅಭಿವೃದ್ಧಿ, ರಾಷ್ಟ್ರೀಯತೆಯನ್ನು ಸಶಕ್ತಗೊಳಿಸುವಲ್ಲಿ ತಳಸಮುದಾಯಗಳ ಪಾತ್ರ, ಕೋವಿಡೋತ್ತರ ಪ್ರಗತಿಪರ ಚಳವಳಿ ಹಾಗೂ ಪ್ರತಿಕ್ರಾಂತಿ ಮುಂದುವರಿದ ನೆಲೆಗಳು ಮತ್ತು ಸಮಕಾಲಿನ ಸವಾಲುಗಳು ಎಂಬ ವಿಷಯದ ಕುರಿತು ಎ.8ರಿಂದ 13ರ ವರೆಗೆ ‘ವರ್ತಮಾನದ ಬಿಕ್ಕಟ್ಟುಗಳು ಮತ್ತು ಭವಿಷ್ಯದ ಸಾಧ್ಯತೆಗಳ' ವಿಶೇಷ ವೆಬಿನಾರ್ ಉಪನ್ಯಾಸ ಸರಣಿ ಆಯೋಜಿಸಲಾಗಿದೆ.

ಎ.14ರಂದು ಬೆಂಗಳೂರಿನ ಮಾಗಡಿ ಮುಖ್ಯರಸ್ತೆ, ಅಂಜನಾನಗರದಲ್ಲಿರುವ ಸ್ಫೂರ್ತಿಧಾಮದಲ್ಲಿ ಏರ್ಪಡಿಸಿರುವ ‘ಅಂಬೇಡ್ಕರ್ ಹಬ್ಬ' ಸಮಾರಂಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ ಪ್ರಧಾನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಅಡ್ವಕೇಟ್ ಜನರಲ್ ಹಾಗೂ ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್ ಪಾಲ್ಗೊಳ್ಳಲಿದ್ದಾರೆಂದು ಎಸ್.ಮರಿಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News