ಜಮ್ಮು-ಕಾಶ್ಮೀರ: ಜಗತ್ತಿನ ಅತಿ ಎತ್ತರದ ಸೇತುವೆಯ ಕಮಾನು ಸಂಪೂರ್ಣ

Update: 2021-04-05 18:34 GMT

ಶ್ರೀನಗರ, ಎ. 5: ಜಮ್ಮು ಹಾಗೂ ಕಾಶ್ಮೀರದ ಚೇನಬ್ ನದಿಪಾತ್ರದ ಮೇಲಿರುವ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆಯ ಕಮಾನು ನಿರ್ಮಾಣ ಸೋಮವಾರ ಪೂರ್ಣಗೊಂಡಿದೆ.

1.3 ಕಿ.ಮೀ. ಉದ್ದದ ಈ ಸೇತುವೆ ಕಾಶ್ಮೀರ ಕಣಿವೆಯ ಸಂಪರ್ಕವನ್ನು ಉತ್ತೇಜಿಸುವ ಗುರಿ ಹೊಂದಿದೆ. ಉಧಮ್‌ಪುರ-ಶ್ರೀನಗರ-ಬಾರಮುಲ್ಲಾ ರೈಲ್ವೆ ಲಿಂಕ್ (ಯುಎಸ್‌ಬಿಆರ್‌ಎಲ್) ಯೋಜನೆಯ ಭಾಗವಾಗಿ 1,486 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದೆ.

 ಚೇನಬ್ ನದಿಯ 359 ಮೀಟರ್ ಎತ್ತರದಲ್ಲಿರುವ ಈ ಸೇತುವೆ ಪ್ಯಾರಿಸ್‌ನ ಐಫೆಲ್ ಗೋಪುರಕ್ಕಿಂತ 35 ಮೀಟರ್ ಎತ್ತರದಲ್ಲಿದೆ. ಒಂದು ವರ್ಷದಲ್ಲಿ ಈ ಸೇತುವ ಸಂಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕಮಾನಿನ ಅತಿ ಎತ್ತರದ ಸ್ಥಳಕ್ಕೆ 5.6 ಮೀಟರ್‌ನ ಕೊನೆಯ ಲೋಹದ (ಮುಚ್ಚುವ ಭಾಗ) ತುಂಡನ್ನು ಅಳವಡಿಸಲಾಯಿತು ಎಂದು ರೈಲ್ವೆ ಸಚಿವಾಲಯ ಸೋಮವಾರ ಹೇಳಿದೆ. ರಚನಾತ್ಮಕ ವಿವರಗಳಿಗೆ ಅತ್ಯಾಧುನಿಕ ಟೆಲ್ಕಾ ಸಾಫ್ಟ್‌ವೇರ್ ಅನ್ನು ಬಳಸಲಾಗಿದೆ. ಈ ರಚನಾತ್ಮಕ ಉಕ್ಕು 10 ಡಿಗ್ರಿ ಸೆಲ್ಸಿಯಸ್‌ನಿಂದ 40 ಡಿಗ್ರಿ ಸೆಲ್ಸಿಯಸ್ ವರೆಗೆ ಸೂಕ್ತವಾಗಿದೆ. 28,660 ಮೆಟ್ರಿಕ್ ಟನ್ ಉಕ್ಕಿನ ಕಾಮಗಾರಿ, 10 ಲಕ್ಷ ಕ್ಯೂಬಿಕ್ ಮೀಟರ್ ಮಣ್ಣಿನ ಕಾಮಗಾರಿ ಹಾಗೂ 66,000 ಕ್ಯೂಬಿಕ್ ಮೀಟರ್ ಕಾಂಕ್ರಿಟ್ ಅನ್ನು ಈ ಸೇತುವೆಯ ನಿರ್ಮಾಣ ಒಳಗೊಂಡಿದೆ ಎಂದು ಉತ್ತರ ರೈಲ್ವೆ ಮ್ಯಾನೇಜರ್ ಅಷುತೋಶ್ ಗಂಗಾಲ್ ಹೇಳಿದ್ದಾರೆ.

ಈ ಕಮಾನಿನ ಒಟ್ಟು ತೂಕ 10,619 ಮೆಟ್ರಿಕ್ ಟನ್ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News