ಮಾಲ್ದಾರೆಯಲ್ಲಿ ಕಾಡಾನೆ ದಾಳಿಗೆ ವೃದ್ಧೆ ಬಲಿ: ಕಾರ್ಮಿಕರ ಪ್ರತಿಭಟನೆ

Update: 2021-04-06 12:20 GMT

ಮಡಿಕೇರಿ, ಎ.6: ಕಾಡಾನೆ ದಾಳಿಗೆ ಸಿಲುಕಿ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೂಬನಕೊಲ್ಲಿಯಲ್ಲಿ ನಡೆದಿದೆ.

ತೂಬನಕೊಲ್ಲಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಲಕ್ಷ್ಮೀ (70) ಎಂಬವರೆ ಮೃತ ವೃದ್ಧೆ. 

ರಾತ್ರಿ ಬಹಿರ್ದೆಸೆಗೆಂದು ಮನೆಯಿಂದ ಹೊರ ತೆರಳಿದ ಲಕ್ಷ್ಮೀ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಗಂಭೀರ ಗಾಯಗೊಂಡ ಅವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆತರುವ ಸಂದರ್ಭ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.

ಕಾರ್ಮಿಕರ ಅಸಮಾಧಾನ
ಕಾಡಾನೆ ದಾಳಿಯಿಂದ ಕಾರ್ಮಿಕ ಮಹಿಳೆ ಸಾವನ್ನಪ್ಪಿದ ಹಿನ್ನೆಲೆ, ಕಾರ್ಮಿಕರು ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಡಾನೆ ಹಾವಳಿ ತಡೆಗೆ ಶಾಶ್ವತ ಕಾರ್ಯ ಯೋಜನೆಯಗಳನ್ನು ರೂಪಿಸಬೇಕೆಂದು ಒತ್ತಾಯಿಸಿದರು.

ಕಾರ್ಮಿಕ ಸಂಘಟನೆಯ ಮುಖಂಡ ಮಹದೇವ್ ಮಾತನಾಡಿ ನಿರಂತರ ಕಾಡಾನೆ ಹಾವಳಿಯಿಂದ ಕಾರ್ಮಿಕರು ಹಾಗೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವನ್ಯಜೀವಿಗಳ ದಾಳಿ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಎಸಿಎಫ್ ಉತ್ತಪ್ಪ ಅವರು 2 ಲಕ್ಷ ರೂ. ಪರಿಹಾರ ಮೊತ್ತದ ಚೆಕ್‍ನ್ನು ನೀಡಿದರು. ಉಳಿದ ಮೊತ್ತವನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ನೀಡುವುದಾಗಿ ತಿಳಿಸಿದರು.

ಜಿ.ಪಂ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ತಾಲೂಕು ಪಂಚಾಯತ್ ಸದಸ್ಯ ಅಜಿತ್ ಕರುಂಬಯ್ಯ, ಮಾಲ್ದಾರೆ ಗ್ರಾ.ಪಂ ಅಧ್ಯಕ್ಷ ಸಮೀರ್, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್, ಕಾರ್ಮಿಕ ಸಂಘಟನೆಯ ಪ್ರಮುಖರಾದ ರಮೇಶ್, ಮಣಿ, ನಾರಾಯಣ ಹಾಗೂ ಕಾರ್ಮಿಕರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News