ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಅವಕಾಶಕ್ಕೆ ನಿರ್ಮಾಪಕರ ಮನವಿ: ಸಿಎಂ ಜೊತೆ ಚರ್ಚಿಸಿ ತೀರ್ಮಾನ ಎಂದ ಸುಧಾಕರ್

Update: 2021-04-06 13:17 GMT

ಬೆಂಗಳೂರು, ಎ.6: ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರ ಭರ್ತಿಗೆ ಎ.7ರವರೆಗೆ ಅವಕಾಶ ಕಲ್ಪಿಸಿರುವುದನ್ನು ಹಾಗೆಯೇ ಮುಂದುವರಿಸಬೇಕೆಂದು ಚಿತ್ರನಿರ್ಮಾಪಕರು ಬೇಡಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದೆಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಮಂಗವಾರ ನಗರದಲ್ಲಿ ಚಿತ್ರನಿರ್ಮಾಪಕರ ನಿಯೋಗ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಕೋವಿಡ್ ಹೊಸ ಮಾರ್ಗಸೂಚಿಯಲ್ಲಿ ಚಿತ್ರಮಂದಿರಗಳಲ್ಲಿ ಶೇ.50 ಪ್ರೇಕ್ಷಕರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಸಿನೆಮಾ ಮಂದಿರಗಳಿಗೆ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿರುವುದರಿಂದ ಹಣ ವಾಪಸ್ ಕೊಡಲು ಆಗುವುದಿಲ್ಲ. ಆದ್ದರಿಂದ ಶೇ.100 ರಷ್ಟು ಪ್ರೇಕ್ಷಕರಿಗೆ ಎ.7ರವರೆಗೆ ಅವಕಾಶ ಮಾಡಿಕೊಡಲಾಗಿತ್ತು. ಇದನ್ನು ವಿಸ್ತರಿಸುವ ಸಂಬಂಧ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಿನೆಮಾ ನಿರ್ಮಾಪಕ ಕೆ.ಮಂಜು ಮಾತನಾಡಿ, ಚಿತ್ರಮಂದಿರಗಳು ಯಾವಾಗಲು ಭರ್ತಿಯಾಗಿರುವುದಿಲ್ಲ. ಮೊದಲ ದಿನ ಪ್ರೇಕ್ಷಕರು ಬರುತ್ತಾರೆ. ನಂತರ ಚಿತ್ರಮಂದಿರಗಳಲ್ಲಿ ಶೇ. 40 ರಿಂದ 50ರಷ್ಟು ಪ್ರೇಕ್ಷಕರು ಮಾತ್ರ ಇರುತ್ತಾರೆ. ಹೀಗಾಗಿ, ಶೇ.50 ಸೀಟುಗಳ ಮಿತಿ ಹಾಕಿದರೆ ಪ್ರೇಕ್ಷಕರಿಗೆ ಗೊಂದಲವಾಗುತ್ತದೆ. ಹೀಗಾಗಿ ಶೇ.100 ಭರ್ತಿಗೆ ಅವಕಾಶ ಮಾಡಿಕೊಡಬೇಕೆಂದು ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ವೇಳೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್, ರಮೇಶ್‍ಯಾದವ್, ರಾಮಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News