ಬುಧವಾರದಿಂದ ಸಾರಿಗೆ ನೌಕರರ ಮುಷ್ಕರ: ಇಂದು ಸಂಜೆಯಿಂದಲೇ ಬಸ್ ಸಂಚಾರ ವಿರಳ, ಪ್ರಯಾಣಿಕರ ಪರದಾಟ
ಶಿವಮೊಗ್ಗ, ಎ.6: ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ನಾಳೆಯಿಂದ(ಎ.7) ಆರಂಭವಾಗಲಿರುವ ಸಾರಿಗೆ ನೌಕರರ ಮುಷ್ಕರದ ಬಿಸಿ ಶಿವಮೊಗ್ಗಕ್ಕೂ ತಟ್ಟಿದೆ.
ಸಾರಿಗೆ ನೌಕರರು ಮುಷ್ಕರ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಮಂಗಳವಾರ ಸಂಜೆಯಿಂದಲೇ ನಗರದ ಬಸ್ ನಿಲ್ದಾಣಕ್ಕೆ ಬರುವ ಬಸ್ಸುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೊರ ಜಿಲ್ಲೆಗಳಿಂದ ಶಿವಮೊಗ್ಗದ ಮೂಲಕ ಹಾದು ಹೋಗುವ ಬಸ್ ಗಳು ಶೇ.40% ಮಾತ್ರ ಬಂದಿದೆ. ಉಳಿದ ಶೇ.60 ರಷ್ಟು ಬಸ್ ಗಳು ಶಿವಮೊಗ್ಗದ ಬಸ್ ನಿಲ್ದಾಣಕ್ಕೆ ಬಂದಿಲ್ಲ. ಇದರಿಂದ ದೂರದ ಊರಿಗೆ ತೆರಳುವ ಪ್ರಯಾಣಿಕರು ಬಸ್ಸಿಲ್ಲದೆ ಪರದಾಟ ನಡೆಸುವಂತಾಗಿದೆ.
ಶಿವಮೊಗ್ಗದ ವಿಭಾಗೀಯ ನಿಯಂತ್ರಣದಿಂದ ಆಪರೇಟ್ ಆಗುವ ಬಸ್ ಗಳು ಶೇ. 50 ರಷ್ಟು ಮಾತ್ರ ರಸ್ತೆಗಿಳಿದಿವೆ. ಶಿವಮೊಗ್ಗ ವಿಭಾಗೀಯ ನಿಯಂತ್ರಣದ ವ್ಯಾಪ್ತಿಯಲ್ಲಿರುವ ನಾಲ್ಕು ಡಿಪೋಗಳಿಂದ ದೂರದ ಊರುಗಳಿಗೆ 205 ಬಸ್ ಗಳು ಸಂಚಾರ ನಡೆಸುತ್ತವೆ. ಆದರೆ ಮುಷ್ಕರದ ಹಿನ್ನಲೆಯಲ್ಲಿ 107 ಬಸ್ ಗಳು ಮಾತ್ರ ಸಂಚರಿಸಿವೆ ಎಂದು ತಿಳಿದುಬಂದಿದೆ.