ಕನ್ನಡದ ಖ್ಯಾತ ಹಿರಿಯ ನಟಿ ಪ್ರತಿಮಾ ದೇವಿ ನಿಧನ
ಬೆಂಗಳೂರು, ಎ.6: ಕನ್ನಡ ಚಿತ್ರರಂಗದ ಹಿರಿಯ ರಂಗಭೂಮಿ ಕಲಾವಿದೆ, ಚಿತ್ರ ನಟಿ ಪ್ರತಿಮಾ ದೇವಿ(88) ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.
ಪ್ರತಿಮಾ ದೇವಿ, ಮಗ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‍ಬಾಬು, ಮಗಳು ನಟಿ ವಿಜಯಲಕ್ಷ್ಮಿಸಿಂಗ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 'ಅವರ ನಿಧನದಿಂದ ಕನ್ನಡ ಚಿತ್ರರಂಗ ಹಿರಿಯ ಕಲಾವಿದೆಯನ್ನು ಕಳೆದುಕೊಂಡಂತಾಗಿದೆ. ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅನನ್ಯವಾದುದ್ದೆಂದು' ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಚಿತ್ರ ಪಯಣ: 1947ರಲ್ಲಿ ಕೃಷ್ಣಲೀಲಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದ ಪ್ರತಿಮಾ ದೇವಿ, 60ಕ್ಕೂ ಹೆಚ್ಚು ಚಿತ್ರಗಳನ್ನು ನಟಿಸುವ ಮೂಲಕ 60, 70ರ ದಶಕದಲ್ಲಿ ಮನೆ ಮಾತಾಗಿದ್ದರು. ನಾಗಕನ್ಯೆ, ಜಗನ್ಮೋಹಿನಿ, ಶ್ರೀನಿವಾಸ ಕಲ್ಯಾಣ, ಚಂಚಲಕುಮಾರಿ, ಧರ್ಮಸ್ಥಳ ಮಹಾತ್ಮೆ, ವರದಕ್ಷಿಣೆ ಸಿನೆಮಾಗಳು ಅವರಿಗೆ ಕೀರ್ತಿ ತಂದುಕೊಟ್ಟಿವೆ.
ಮುಖ್ಯಮಂತ್ರಿ ಸಂತಾಪ: ಕನ್ನಡ ಚಿತ್ರರಂಗದ ಮೇರು ಕಲಾವಿದೆಯಾಗಿದ್ದ ಪ್ರತಿಮಾ ದೇವಿ ಅಗಲಿಕೆ ಸಿನೆಮಾ ರಂಗಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಕುಟುಂಬವರ್ಗಕ್ಕೆ, ಅಭಿಮಾನಿ ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿಯೆಂದು ಸಂತಾಪ ವ್ಯಕ್ತಪಡಿಸಿದ್ದಾರೆ.