ಬಿಎಸ್‌ವೈ ವಿರುದ್ಧ ಸಮರ ಸಾರಿರುವ ಈಶ್ವರಪ್ಪ, ಯತ್ನಾಳ್ ಗೆ ಬಿ.ಎಲ್.ಸಂತೋಷ್ ಬೆಂಬಲವಿದೆ: ಸಿದ್ದರಾಮಯ್ಯ

Update: 2021-04-06 16:27 GMT

ರಾಯಚೂರು, ಎ.6: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರವು ‘20 ಪರ್ಸೆಂಟ್ ಸರಕಾರ’. ಮುಖ್ಯಮಂತ್ರಿ ಪುತ್ರ ಹಾಗೂ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಈ ಸರಕಾರದಲ್ಲಿ ಛಾಯಾ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಂಗಳವಾರ ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರನಿಗೆ ಹಣ ಕೊಟ್ಟರೆ ಯಾರಿಗೆ ಬೇಕೋ ಅವರಿಗೆ ಅನುದಾನ ವರ್ಗಾವಣೆ ಆಗುತ್ತೆ. ಯಡಿಯೂರಪ್ಪ ಕೇವಲ ಸಹಿ ಮಾಡುತ್ತಾರೆ ಅಷ್ಟೇ. ಈ ಸರಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಪ್ರಮಾಣವನ್ನು ನಾನು ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಎಂದೂ ನೋಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಡಿಸಿದರು.

ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾವು ಸಿಡಿ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದು ದೂರು ನೀಡಿರುವ ವಿಷಯವನ್ನು ಬಳಸಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪದಚ್ಯುತಿಗೆ ಪ್ರಯತ್ನಗಳು ನಡೆಯುತ್ತಿವೆ. ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಸಮರ ಸಾರಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಈಶ್ವರಪ್ಪಗೆ ಆರೆಸ್ಸೆಸ್ ಮುಖಂಡ ಬಿ.ಎಲ್.ಸಂತೋಷ್ ಬೆಂಬಲವಿದೆ. ಯುಗಾದಿ ಹಬ್ಬದ ಬಳಿಕ ಮೇ ತಿಂಗಳಲ್ಲಿ ರಾಜ್ಯ ಸರಕಾರ ಪತನವಾಗುತ್ತದೆ ಎಂದು ಯತ್ನಾಳ್ ಬಹಿರಂಗವಾಗಿಯೆ ಹೇಳಿಕೆಗಳನ್ನು ನೀಡಿದರೂ ಆತನ ವಿರುದ್ಧ ಯಾವುದೇ ಕ್ರಮಕೈಗೊಳ್ಳಲು ಆಗುತ್ತಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ನಮ್ಮ ನಿರೀಕ್ಷೆಗೂ ಮೀರಿ ಹೆಚ್ಚಿನ ಬೆಂಬಲ ಸಿಗುತ್ತಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಜನಪರವಾಗಿದ್ದ ಶಾಸಕ ಬಿ.ನಾರಾಯಣರಾವ್ ಅವರ ಅಕಾಲಿಕ ನಿಧನದಿಂದಾಗಿ ಅಲ್ಲಿ ಅನುಕಂಪದ ಅಲೆಯಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನೆ ಕಣಕ್ಕಿಳಿಸಿದ್ದೇವೆ. ಈ ಬಾರಿ ಮೂರು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ವರುಣಾ ಕ್ಷೇತ್ರಕ್ಕೆ ಯಾರೇ ಬಂದರೂ ಸ್ವಾಗತ

ವಿಜಯೇಂದ್ರ ಕಳೆದ ಚುನಾವಣೆ ಸಂದರ್ಭದಲ್ಲಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದ. ಆದರೆ, ಸ್ಪರ್ಧೆ ಮಾಡಲಿಲ್ಲ. ನನ್ನ ಮಗ ಯತೀಂದ್ರ 59 ಸಾವಿರ ಮತಗಳ ಅಂತರದಿಂದ ಅಲ್ಲಿ ಗೆದ್ದಿದ್ದಾನೆ. ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ, ಯಡಿಯೂರಪ್ಪ ಕೊಡುಗೆ ಏನು? ವರುಣಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿರುವುದು ನಾವು. ಜಾತಿ ಮುಂದಿಟ್ಟುಕೊಂಡು ಬಂದರೆ, ಮತದಾರರು ನಮ್ಮನ್ನು ಬಿಟ್ಟುಕೊಡಲ್ಲ. ಆ ಕ್ಷೇತ್ರಕ್ಕೆ ಯಾರಾದರೂ ಬಂದು ಚುನಾವಣೆಗೆ ನಿಂತುಕೊಂಡರೂ ಅವರಿಗೆ ನಮ್ಮ ಸ್ವಾಗತವಿದೆ.

-ಸಿದ್ದರಾಮಯ್ಯ ವಿರೋಧಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News