×
Ad

ಪ್ರವಾಸಿಗರನ್ನು ಆಕರ್ಷಿಸಲು ಮಂಗಳೂರು ಸೇರಿದಂತೆ ರಾಜ್ಯದ 6 ಕಡೆ ಹೆಲಿಪೋರ್ಟ್ ಸ್ಥಾಪನೆ: ಸಚಿವ ಯೋಗೇಶ್ವರ್

Update: 2021-04-06 21:59 IST

ಕಲಬುರಗಿ, ಎ.6: ಹೆಲಿಟೂರಿಸಂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ರಾಜ್ಯದ ಆರು ಕಡೆಗಳಲ್ಲಿ ಹೆಲಿಪೋರ್ಟ್ ಸ್ಥಾಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.   

ಮಂಗಳವಾರ ಕಲಬುರಗಿ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಮತ್ತು ಪರಿಸರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿ, ಹುಬ್ಬಳ್ಳಿ, ಹಂಪಿ, ಮೈಸೂರು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ವಿಮಾನ ಸಂಚಾರ ಇರುವುದರಿಂದ ಪ್ರಾಥಮಿಕ ಹಂತವಾಗಿ ಈ ಸ್ಥಳಗಳಲ್ಲಿ ಇಲಾಖೆಯಿಂದಲೇ ಹೆಲಿಪೋರ್ಟ್ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರತಿಯೊಂದು ಹೆಲಿಪೋರ್ಟ್‍ಗೆ 10 ಕೋಟಿ ರೂ. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.

ಕಲಬುರಗಿಯಲ್ಲಿ ಹೆಲಿಪೋರ್ಟ್ ಸ್ಥಾಪನೆಗೆ ಸಂಬಂಧಿಸಿದಂತೆ ಶಾಸಕರೊಂದಿಗೆ ಚರ್ಚಿಸಿ ಹೆದ್ದಾರಿಗೆ ಹೊಂದಿಕೊಂಡಂತೆ ಭೂಮಿಯನ್ನು 15 ದಿನದಲ್ಲಿ ಒದಗಿಸುವಂತೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ಚಂದ್ರಂಪಳ್ಳಿ ಜಲಾಶಯ, ಅಮರ್ಜಾ ಜಲಾಶಯ, ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜ್, ಕಲಬುರಗಿ ತಾಲೂಕಿನ ಖಾಜಾ ಕೋಟನೂರ ಕೆರೆ, ಭೋಸಗಾ ಕೆರೆ, ಸೇಡಂ ತಾಲೂಕಿನ ಬೀರನಳ್ಳಿಯಲ್ಲಿಯೂ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಸ್ಥಾಪನೆ ಕುರಿತಂತೆ ಪ್ರಸ್ತಾವನೆ ಕಳುಹಿಸಿದಲ್ಲಿ ಶೀಘ್ರವೇ ಕಾರ್ಯಾನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.

ಕಲಬುರಗಿಯಲ್ಲಿ ವಿಮಾನ ನಿಲ್ದಾಣವಿದ್ದರೂ ಒಂದೂ ಸ್ಟಾರ್ ಹೋಟೆಲ್‍ಗಳಿಲ್ಲ. ಇದು ಪ್ರವಾಸೋದ್ಯಮಕ್ಕೆ ಮಾರಕವಾಗಿದೆ. ಸ್ಟಾರ್ ಹೋಟೆಲ್ ನಿರ್ಮಿಸಲು ಮುಂದೆ ಬಂದಲ್ಲಿ ಇಲಾಖೆಯಿಂದ ಶೇ.15ರಷ್ಟು ಸಬ್ಸಿಡಿ ನೀಡಲಾಗುವುದು ಎಂದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ ಕುಮಾರ ಪಾಂಡೆ ಮಾತನಾಡಿ, ಹೆಲಿಟೂರಿಸಂ ಭಾಗವಾಗಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹಂತ-ಹಂತವಾಗಿ ಹೆಲಿಪ್ಯಾಡ್ ನಿರ್ಮಿಸುವ ಯೋಜನೆ ಹೊಂದಿದೆ. ಜಿಲ್ಲೆಯಲ್ಲಿ ಜಂಗಲ್ಸ್ ಲಾಡ್ಜಸ್ ಮತ್ತು ರೆಸಾರ್ಟ್ ನಿರ್ಮಾಣಕ್ಕೆ ಮೂರು ದಿನದೊಳಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಟೆಂಡರ್ ಕರೆಯಲಾಗುವುದು. ಪ್ರವಾಸಿ ಮೂಲಸೌಕರ್ಯ ಕಾಮಗಾರಿಗಳು ನಿಗದಿತ ಅವಧಿಯಲ್ಲಿಯೇ ಮುಗಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News