ಎಸ್ಐಟಿ ಹೀಗೆ ಕೆಲಸ ಮಾಡಬೇಕು ಎಂದು ಟೀಕೆ, ಟಿಪ್ಪಣಿ ಮಾಡುವ ಅಗತ್ಯವಿಲ್ಲ: ಪ್ರವೀಣ್ ಸೂದ್

Update: 2021-04-06 17:32 GMT

ಶಿವಮೊಗ್ಗ, ಎ.6: ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಸ್ವತಂತ್ರವಾಗಿ ತನಿಖೆ ನಡೆಸುತ್ತಿದ್ದು, ಕಾನೂನು ಚೌಕಟಿನಲ್ಲಿ ಕೆಲಸ ನಿರ್ವಹಿಸುತ್ತಿದೆ. ಹಾಗಾಗಿ ಯಾರೊಬ್ಬರು ಎಸ್ಐಟಿ ಹೀಗೆ ಕೆಲಸ ಮಾಡಬೇಕು, ಹಾಗೆ ಮಾಡಬೇಕು ಎಂದು ಟೀಕೆ ಟಿಪ್ಪಣಿ ಮಾಡಬಾರದು ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು. 

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಎಸ್ಐಟಿ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಬೆಂಗಳೂರು ಕಮಿಷನರ್ ಕಮಲ್ ಪಂಥ್ ಅವರು ಈಗಾಗಲೇ ಮಾಧ್ಯಮಗಳಿಗೆ ತಿಳಿಸುತ್ತಿದ್ದಾರೆ. ಎಸ್ಐಟಿ ತನಿಖೆಯ ಬಗ್ಗೆ ನ್ಯಾಯಾಲಯ ಮಾಹಿತಿ ಕೇಳಿದೆ. ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು. 

ಸದ್ಯದಲ್ಲೇ ಚಾರ್ಚ್ ಶೀಟ್

ಶಿವಮೊಗ್ಗದ ಹುಣಸೋಡು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ಸಂಬಂಧ ಸದ್ಯದಲ್ಲೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ. ಆಗ ಸ್ಫೋಟದ ಕುರಿತು ಸಂಪೂರ್ಣ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗಲಿದೆ ಎಂದರು. 

ಪೊಲೀಸ್ ಕಮಿಷನರೇಟ್ ಸ್ಥಾಪನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗದಲ್ಲಿ ಪೊಲೀಸ್ ಕಮಿಷನರೇಟ್ ಸ್ಥಾಪನೆ ವಿಚಾರದಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಯಾವುದೇ ನಗರದಲ್ಲಿ ಹತ್ತು ಲಕ್ಷ ಜನಸಂಖ್ಯೆ ಇದ್ದರಷ್ಟೇ ಕಮಿಷನರೇಟ್ ಸ್ಥಾಪನೆ ಮಾಡಲಾಗುತ್ತದೆ. ಶಿವಮೊಗ್ಗದಲ್ಲಿ ಕಮಿಷನರೇಟ್ ಸ್ಥಾಪನೆ ವಿಚಾರ ಸರ್ಕಾರಕ್ಕೆ ಬಿಟ್ಟದ್ದು ಎಂದು ತಿಳಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News