1 ರಿಂದ 9ನೇ ತರಗತಿವರೆಗಿನ ಪರೀಕ್ಷೆ ಬಗ್ಗೆ ವಾರದೊಳಗೆ ನಿರ್ಧಾರ: ಸಚಿವ ಸುರೇಶ್‍ ಕುಮಾರ್

Update: 2021-04-06 18:17 GMT

ಧಾರವಾಡ ಎ.6: 1 ರಿಂದ 9ನೇ ತರಗತಿವರೆಗಿನ ಪರೀಕ್ಷೆಗಳನ್ನು ನಡೆಸುವ ಕುರಿತು ಒಂದು ವಾರದೊಳಗೆ ನಿರ್ಧಾರ ಕೈಗೊಳ್ಳಲಾಗುವುದು. ಈ ಬಗ್ಗೆ ಅನಗತ್ಯ ಗೊಂದಲ ಬೇಡ ಎಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಡಯಟ್ ಸಭಾಂಗಣದಲ್ಲಿ ಬೆಳಗಾವಿ ವಿಭಾಗದ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಶಿರಸಿ, ಗದಗ ಮತ್ತು ಹಾವೇರಿ ಶೈಕ್ಷಣಿಕ ಜಿಲ್ಲೆಗಳ ಎಸೆಸೆಲ್ಸಿ ಪಿಯುಸಿ ಪರೀಕ್ಷಾ ಪೂರ್ವಸಿದ್ಧತಾ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ನಡುವೆ ಕಳೆದ 2019-20ನೇ ಸಾಲಿನಲ್ಲಿ ನಡೆಸಿದ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯ ಅನುಭವವನ್ನು ಆಧರಿಸಿ ಪ್ರಸಕ್ತ 2021-22ನೇ ಸಾಲಿನ ಪರೀಕ್ಷೆಯನ್ನು ನಡೆಸಲಾಗುವುದೆಂದು ಅವರು ತಿಳಿಸಿದ್ದಾರೆ.

ಶಿಕ್ಷಣ ಇಲಾಖೆ ಕಳೆದ ವರ್ಷ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಶಿಕ್ಷಣ ಇಲಾಖೆಯೊಂದಿಗೆ ಸಾರಿಗೆ, ಕಂದಾಯ, ಆರೋಗ್ಯ ಇಲಾಖೆಗಳು ಕೈಜೋಡಿಸಿ ಈ ಯಶಸ್ಸಿಗೆ ಕಾರಣವಾಗಿದ್ದವು. ಕೇಂದ್ರ ಲೋಕಸೇವಾ ಆಯೋಗವು ತನ್ನ ಪರೀಕ್ಷೆಗಳನ್ನು ಆಯೋಜಿಸುವ ಸಂದರ್ಭದಲ್ಲಿ ಕರ್ನಾಟಕದ ಪರೀಕ್ಷೆಗಳನ್ನು ಮಾದರಿಯಾಗಿ ಪರಿಗಣಿಸುವಂತೆ ಸೂಚಿಸಿತ್ತು, ಇದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತರಗತಿಗಳಲ್ಲಿ ನೇರವಾಗಿ ಪಾಠಗಳನ್ನು ಆಲಿಸಿದ್ದರು. ಈ ಬಾರಿ ಮಕ್ಕಳಿಗೆ ಕೇವಲ ಆನ್‍ಲೈನ್ ಪಾಠಗಳನ್ನು ನೀಡಲಾಗಿದೆ. ಕಳೆದ ಜನವರಿ 9 ರಿಂದ ನೇರವಾದ ತರಗತಿಗಳು ನಡೆಯುತ್ತಿವೆ. ಇನ್ನು 75 ದಿನಗಳು ಪರೀಕ್ಷೆಗೆ ಬಾಕಿ ಇವೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ, ಸಾಮರ್ಥ್ಯ ಹೆಚ್ಚಿಸುವ ಕಾರ್ಯಗಳು ದೊಡ್ಡ ಪ್ರಮಾಣದಲ್ಲಿ ನಡೆಯಬೇಕೆಂದು ಅವರು ಸೂಚಿಸಿದ್ದಾರೆ.

ಪರೀಕ್ಷೆ ಆಯೋಜನೆ ಕುರಿತು ಕಳೆದ ವರ್ಷ ನೀಡಿದ ಮಾರ್ಗಸೂಚಿಗಳನ್ನು ಅಲ್ಪಪ್ರಮಾಣದಲ್ಲಿ ಪರಿಷ್ಕರಿಸಿ ನೀಡಲಾಗುವುದು. ಅವುಗಳನ್ನು ಎಲ್ಲ ಜಿಲ್ಲೆಗಳ ಡಿಡಿಪಿಐ, ಡಿಡಿಪಿಯು ಹಾಗೂ ಬಿಇಓಗಳು ಕಾರ್ಯಗತಗೊಳಿಸಬೇಕು. ಉಳಿದ ಇಲಾಖೆಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಸರಕಾರೇತರ ಅಭಿವೃದ್ಧಿ ಸಂಸ್ಥೆಗಳ ಸಹಕಾರ ಪಡೆಯಬೇಕೆಂದುಅವರು ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ಪ್ರೌಢಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುವಲ್ಲಿ ಮುಖ್ಯೋಪಾಧ್ಯಾಯರ ಪಾತ್ರ ಪ್ರಮುಖವಾಗಿದೆ. ಮುಖ್ಯೋಪಾಧ್ಯಾಯರು ಹಾಗೂ ಸಹಶಿಕ್ಷಕರ ನಡುವೆ ಉತ್ತಮ ಸಂಬಂಧ ಇರಬೇಕು. ಶಿಕ್ಷಕರ ವಿಷಯವಾರು ದಿನಚರಿಗಳನ್ನು ಪ್ರತಿನಿತ್ಯ ಪರಿಶೀಲಿಸಿ ಈ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಮುಖ್ಯೋಪಾಧ್ಯಾಯರನ್ನು ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಬೆಳಗಾವಿ ಡಯಟ್ ಪ್ರಕಟಿಸಿರುವ ಶಿಕ್ಷಣ ಸಂಪದ ಕೃತಿ ಹಾಗೂ ಸಿಸ್ಲೆಪ್ ಲಾಂಛನ ಬಿಡುಗಡೆ ಮಾಡಿದರು. ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕಿ ಮಮತಾ ನಾಯಕ್, ಸಿಸ್ಲೆಪ್ ನಿರ್ದೇಶಕ ಬಿ.ಎಸ್.ರಘುವೀರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ರಸಾದ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News