ಸಾರಿಗೆ ನೌಕರರ ಮುಷ್ಕರ: ಜನರಿಲ್ಲದೆ ಬಣಗುಡುತ್ತಿದೆ ಶಿವಮೊಗ್ಗ ಬಸ್ ನಿಲ್ದಾಣ!
ಶಿವಮೊಗ್ಗ, ಎ.7: ಆರನೇ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರು ಆರಂಭಿಸಿರುವ ಮುಷ್ಕರದ ಹಿನ್ನೆಲೆಯಲ್ಲಿ ಶಿವಮೊಗ್ಗ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಖಾಲಿಯಾಗಿದೆ.
ಸಾರಿಗೆ ನೌಕರರು ಗೈರಾಗಿರುವುದರಿಂದ ಬಸ್ಸುಗಳು ನಿಲ್ದಾಣಕ್ಕೆ ಬಂದಿಲ್ಲ. ಇನ್ನು ನಿಲ್ದಾಣ ಪ್ರಯಾಣಿಕರಿಲ್ಲದೆ ಬಣಗುಡುತ್ತಿದೆ. ಮಂಗಳವಾರ ರಾತ್ರಿಯಿಂದಲೇ ಸಿಬ್ಬಂದಿಯ ಕೊರತೆ ಉಂಟಾಗಿತ್ತು. ಬುಧವಾರ ಬೆಳಗ್ಗೆ ಹೊತ್ತಿಗೆ ನೌಕರರು ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.
ಸದಾ ಪ್ರಯಾಣಿಕರಿಂದ ತುಂಬಿರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಜನರು, ಕೆಎಸ್ಸಾರ್ಟಿಸಿ ಸಿಬ್ಬಂದಿಯಿದ್ದಾರೆ.
ಸಾವಿರಕ್ಕೂ ಹೆಚ್ಚು ಬಸ್ ಸಂಚಾರ
ಶಿವಮೊಗ್ಗ ಬಸ್ ನಿಲ್ದಾಣದಿಂದ ಪ್ರತಿದಿನ ಸಾವಿರಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುತ್ತವೆ. ಶಿವಮೊಗ್ಗ ಘಟಕ ಮತ್ತು ವಿವಿಧೆಡೆಯಿಂದ ಬರುವ ಬಸ್ಸುಗಳು ಸೇರಿ ಸುಮಾರು 1,300 ಬಸ್ಸುಗಳು ನಿಲ್ದಾಣಕ್ಕೆ ಬಂದು ಹೋಗುತ್ತವೆ. ಆದರೆ ನೌಕರರ ಮುಷ್ಕರದಿಂದಾಗಿ ಬೆಳಗ್ಗೆಯಿಂದ ಒಂದೂ ಬಸ್ ನಿಲ್ದಾಣಕ್ಕೆ ಬಂದಿಲ್ಲ ಅನ್ನುತ್ತಾರೆ ಶಿವಮೊಗ್ಗ ನಿಲ್ದಾಣದ ನಿಯಂತ್ರಣಾಧಿಕಾರಿ ಸಿದ್ದೇಶ್.
ಎಲ್ಲೆಲ್ಲಿಗೆ ಎಷ್ಟು ಬಸ್ ಸಂಚರಿಸುತ್ತಿದ್ದವು?
ಶಿವಮೊಗ್ಗ ನಿಲ್ದಾಣದಿಂದ ಪ್ರತಿದಿನ ವಿವಿಧ ಜಿಲ್ಲೆಗಳು ಬಸ್ಸುಗಳು ಸಂಚರಿಸುತ್ತವೆ. ಬೆಂಗಳೂರಿಗೆ 141, ಮೈಸೂರಿಗೆ 63, ಹಾಸನ 26, ಗದಗ 11, ಚಿತ್ರದುರ್ಗ 23, ಉಡುಪಿ - ಮಂಗಳೂರು 17, ಚಿಕ್ಕಮಗಳೂರು – ಧರ್ಮಸ್ಥಳ 96, ರಾಯಚೂರು – ಹೈದರಾಬಾದ್ 93, ಬೆಳಗಾವಿ – ಪೂನಾ – ಮುಂಬೈ 45, ಹರಿಹರ – ದಾವಣಗೆರೆ 53, ಬನವಾಸಿ- ಆನವಟ್ಟಿ – ಶಿರಸಿ 17, ಕೊಲ್ಲೂರು – ಬೈಂದೂರು – ಭಟ್ಕಳ 8, ಶಿರಸಿ – ಕಾರವಾರ 43 ಸೇರಿದಂತೆ ವಿವಿಧೆಡೆ ಬಸ್ಸುಗಳು ಸಂಚರಿಸುತ್ತಿದ್ದವು. ಪ್ರತಿ ದಿನ ಅಂದಾಜು 30 ಸಾವಿರ ಪ್ರಯಾಣಿಕರು ನಿಲ್ದಾಣಕ್ಕೆ ಬಂದು ಹೋಗುತ್ತಿದ್ದರು.