ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲವಿದೆ, ಆದರೆ ಕರ್ತವ್ಯಕ್ಕೆ ಹಾಜರಾಗಬೇಕು: ಬಡಗಲಪುರ ನಾಗೇಂದ್ರ

Update: 2021-04-07 12:54 GMT

ಬೆಂಗಳೂರು, ಎ.7: ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗುತ್ತಲೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕೈಗೊಂಡಿರುವ ಮುಷ್ಕರವನ್ನು ಚಳವಳಿಯಾಗಿ ಮುಂದುವರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾರಿಗೆ ವ್ಯವಸ್ಥೆಯು ಅತಿ ಮುಖ್ಯವಾದ ಸೇವೆಯಾಗಿದೆ. ಇದರ ಏರುಪೇರಿನಿಂದ ಸಾರ್ವಜನಿಕರು ಸಮಸ್ಯೆಗಳಿಗೆ ಸಿಲುಕುತ್ತಾರೆ. ಹೀಗಾಗಿ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಲೇ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರದ ಬದಲಿಗೆ ಚಳವಳಿಯನ್ನು ಆರಂಭಿಸಲಿ. ಆ ಮೂಲಕ ತಮ್ಮ ಹೋರಾಟಕ್ಕೆ ಸಾರ್ವಜನಿಕರ ಸಂಪೂರ್ಣ ಬೆಂಬಲ ಪಡೆಯುವ ನಿಟ್ಟಿನಲ್ಲಿ ಸಾಗಲಿ ಎಂದು ತಿಳಿಸಿದ್ದಾರೆ.

ಸರಕಾರ ಸ್ಪಂದಿಸಲಿ: ಸಾರಿಗೆ ಇಲಾಖೆಯಲ್ಲಿ ಶ್ರಮಿಸುತ್ತಿರುವವರು ಶ್ರೀಮಂತರ ಮಕ್ಕಳಲ್ಲ. ಇದನ್ನೇ ನಂಬಿಕೊಂಡು ಬದುಕನ್ನು ಸವೆಸುತ್ತಿದ್ದಾರೆ. ಹೀಗಾಗಿ ತಮ್ಮ ಜೀವನ ನಿರ್ವಹಣೆಗೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಕೇಳುತ್ತಿದ್ದಾರೆ. ಇವರ ಬೇಡಿಕೆಗಳನ್ನು ಸರಕಾರ ಆದ್ಯತೆ ಮೇರೆಗೆ ಪರಿಗಣಿಸಿ ಪೂರಕವಾಗಿ ಸ್ಪಂದಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಪ್ರಧಾನ ಕಾರ್ಯದರ್ಶಿ ಎಂ.ಶಂಕರಪ್ಪ, ರವಿಕಿರಣ್ ಪುನಚ, ಕಾರ್ಯದರ್ಶಿ ಪಿ.ಗೋಪಾಲ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News