ನಷ್ಟದ ನೆಪದಲ್ಲಿ ನೌಕರರನ್ನು ಅರೆ ಹೊಟ್ಟೆಯಲ್ಲಿ ದುಡಿಸಿಕೊಳ್ಳುವುದು ದೌರ್ಜನ್ಯ: ಕೋಡಿಹಳ್ಳಿ ಚಂದ್ರಶೇಖರ್

Update: 2021-04-07 13:29 GMT

ತುಮಕೂರು, ಎ.7: ಸಂಸ್ಥೆ ನಷ್ಟದಲ್ಲಿದೆ ಎಂಬ ನೆಪವೊಡ್ಡಿ 1.30 ಲಕ್ಷ ನೌಕರರನ್ನು ಅರೆ ಹೊಟ್ಟೆಯಲ್ಲಿ ದುಡಿಸಿಕೊಳ್ಳುವುದು ದೌರ್ಜನ್ಯ. ಕೊಟ್ಟ ಮಾತಿನಂತೆ ಸಾರಿಗೆ ಸಚಿವರು ಆರನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಸಾರಿಗೆ ನೌಕರರಿಗೆ ನೀಡುವ ಮೂಲಕ ನಡೆದುಕೊಳ್ಳಲಿ ಎಂದು ಕೆಎಸ್‌ಆರ್‌ಟಿಸಿ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ನಗರದ ಕನ್ನಡ ಭವನದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಡಿಸೆಂಬರ್ ನಲ್ಲಿ ನಡೆದ ಧರಣಿ ಸತ್ಯಾಗ್ರಹದ ವೇಳೆ ಸರಕಾರವೇ ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸುವಂತೆ ಇಟ್ಟ ಬೇಡಿಕೆಗೆ ಬದಲಾಗಿ, ಆರನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸುವ ಹೊಸ ಪ್ರಸ್ತಾಪ ಮುಂದಿಟ್ಟು, ಧರಣಿ ಹಿಂಪಡೆಯುವಂತೆ ಮಾಡಿತ್ತು. ಕೊಟ್ಟ ಮಾತಿನಂತೆ ಸರಕಾರ ನಡೆದುಕೊಳ್ಳಲಿ ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು.

ಸರಕಾರ ಡಿಸೆಂಬರ್ ನ ಪ್ರತಿಭಟನೆಯ ವೇಳೆ ತಾವೇ ಇಟ್ಟ ಪ್ರಸ್ತಾವನೆಯನ್ನು ಏಕಾಏಕಿ ಹಿಂಪಡೆಯುವ ಮೂಲಕ ಶೇ.8ರಷ್ಟು ವೇತನ ಹೆಚ್ಚಳ ಮಾಡುವ ಮಾತನಾಡುತ್ತಿದೆ. ಸೇವಾ ವಲಯದಲ್ಲಿ ಕೆಲಸ ಮಾಡುತ್ತಿರುವ ನೌಕರರು ಎಂಬ ಕಾರಣಕ್ಕೆ ಅರೆ ಹೊಟ್ಟೆಯಲ್ಲಿ ದುಡಿಯಬೇಕೇ ಎಂದು ಪ್ರಶ್ನಿಸಿದ ಅವರು, ನೌಕರರು ಒಗ್ಗಟ್ಟಿನಿಂದ ಇದ್ದು, ಸರಕಾರದ ಎಲ್ಲಾ ಪ್ರಯತ್ನಗಳು ವಿಫಲವಾಗಲಿವೆ ಎಂದು ನುಡಿದರು

ಎಸ್ಮಾ ಜಾರಿ ಮಾಡಲು ಸಾರಿಗೆ ನೌಕರರು ಯಾವ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಪ್ರಶ್ನಿಸಿದ ಕೋಡಿಹಳ್ಳಿ, ಸರಕಾರಿ ನೌಕರರಿಗೆ ಹೋಲಿಕೆ ಮಾಡಿದರೆ ಅರ್ಧ ವೇತನಕ್ಕೆ ಸಾರಿಗೆ ನೌಕರರು ದುಡಿಯುತ್ತಿದ್ದಾರೆ. ಇದು ಸರಿಯೇ ? ನ್ಯಾಯ ಕೇಳುವುದು ಕಾನೂನಿನ ಉಲ್ಲಂಘನೆಯಾಗುತ್ತದೆಯೇ ?  ಎಸ್ಮಾ ಜಾರಿ ಹೆಸರಿನಲ್ಲಿ ಬೆದರಿಸುವ ತಂತ್ರವನ್ನು ಸರಕಾರ ಕೈಬಿಡಬೇಕು. ಜಾತಿಗಳ ಹೆಸರಿನಲ್ಲಿ, ಮಠಗಳಿಗೆ ನೂರಾರು ಕೋಟಿ ನೀಡುವ ಸರಕಾರ, ದುಡಿಯುತ್ತಿರುವ 1.30 ಲಕ್ಷ ನೌಕರರಿಗಾಗಿ 700 ಕೋಟಿ ಖರ್ಚು ಮಾಡಲು ಆಗುವುದಿಲ್ಲ ಎಂದರೆ ಹೇಗೆ, ಎಷ್ಟು ವರ್ಷ ಈ ಶೋಷಣೆಯನ್ನು ನೌಕರರು ಅನುಭವಿಸಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News