ಮೇ 2ರ ನಂತರ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಎಂದ ಬಿಜೆಪಿ ಶಾಸಕ ಯತ್ನಾಳ್

Update: 2021-04-07 13:46 GMT

ಬೆಂಗಳೂರು, ಎ. 7: `ಮುಖ್ಯಮಂತ್ರಿಯವರ ಬದಲಾವಣೆ ನಿಶ್ಚಿತ. ಮೇ ತಿಂಗಳ 2ರ ನಂತರ ಸಿಎಂ ಬದಲಾವಣೆಯಾಗಲಿದ್ದು, ಉತ್ತರ ಕರ್ನಾಟಕ ಮೂಲದವರೆ ಮುಖ್ಯಮಂತ್ರಿಯಾಗಲಿದ್ದಾರೆ' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಯಡಿಯೂರಪ್ಪನವರು ಮೀಸಲಾತಿ ನೀಡದಿದ್ದರೂ ಮೇ 2ರ ನಂತರ ಬರುವ ನೂತನ ಮುಖ್ಯಮಂತ್ರಿ ನಮ್ಮ ಸಮುದಾಯಕ್ಕೆ ನಿಶ್ಚಿತವಾಗಿಯೂ ಮೀಸಲಾತಿ ಕಲ್ಪಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ದುಡ್ಡಿದೆ, ಅದಕ್ಕೆ ಉಸ್ತುವಾರಿ ಮಾಡಿದ್ದಾರೆ: ಬಿಎಸ್‍ವೈ ಅವರ ಪುತ್ರ ಬಿ.ವೈ.ವಿಜಯೇಂದ್ರ ಬಳಿ ಸಾವಿರಾರು ಕೋಟಿ ರೂ.ದುಡ್ಡಿದೆ. ಅದಕ್ಕೆ ಅವರನ್ನು ಉಪಚುನಾವಣೆ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಹೀಗಾಗಿ ಅಭ್ಯರ್ಥಿಗಳು ವಿಜಯೇಂದ್ರನನ್ನು ಪ್ರಚಾರಕ್ಕೆ ಕರೆಯುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಅವರ ಯೋಗ್ಯತೆ ಗೊತ್ತಾಗಲಿದೆ. ಜಾರಿ ನಿರ್ದೇಶನಾಲಯ(ಇಡಿ)ದವರು ವಿಜಯೇಂದ್ರನನ್ನು ದಿಲ್ಲಿಗೆ ಕರೆಸಿಕೊಂಡು ತನಿಖೆ ಮಾಡಿದ್ದಾರೆ. ಸುಳ್ಳಾದರೆ ವಿಜಯೇಂದ್ರ ಹೇಳಲಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ಸಚಿವ ಈಶ್ವರಪ್ಪ ರಾಜ್ಯಪಾಲರನ್ನು ಭೇಟಿ ಮಾಡಿದ್ದು, ಎಪ್ರಿಲ್ 17ರ ಬಳಿಕ ಇನ್ನೂ ಕೆಲ ಶಾಸಕರು ಹಾಗೂ ಸಚಿವರು ಬಂಡಾಯ ಏಳಲಿದ್ದಾರೆ. ಸೂರ್ಯ-ಚಂದ್ರ ಇರುವವರೆಗೂ ಯಡಿಯೂರಪ್ಪ ಸಿಎಂ ಎಂದು ಹೇಳುತ್ತಾರೆ. ಅವರಿಗೆ ಏನು ಕಾಶ್ಮೀರ ರೀತಿಯಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದ್ಯಾ? ಪಕ್ಷದ ಸಿದ್ಧಾಂತದ ಹಿನ್ನೆಲೆಯಲ್ಲಿ ಎರಡು ವರ್ಷ ಬೋನಸ್ ಕೊಟ್ಟಿದ್ದು ದೊಡ್ಡದು ಎಂದು ಯತ್ನಾಳ್ ಲೇವಡಿ ಮಾಡಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಯಡಿಯೂರಪ್ಪ ಅವರನ್ನು ರಕ್ಷಣೆ ಮಾಡುತ್ತಾರೇಕೆ ಎಂದು ಪ್ರಶ್ನಿಸಿದ ಯತ್ನಾಳ್, ಬಿಎಸ್‍ವೈ ಇನ್ನೂ ಎರಡು ವರ್ಷ ಮುಂದುವರಿದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ ಎಂದು ಅವರಿಬ್ಬರು ಹಗಲುಗನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News