ಯಾರ ವಿರುದ್ಧವೂ ದೂರು ಕೊಟ್ಟಿಲ್ಲ, ಎಲ್ಲವೂ ಕೇವಲ ಊಹಾಪೋಹ: ಸಿಎಂ ವಿರುದ್ಧ ದೂರಿನ ಬಗ್ಗೆ ಈಶ್ವರಪ್ಪ ಸ್ಪಷ್ಟನೆ

Update: 2021-04-07 13:51 GMT

ಬೆಂಗಳೂರು, ಎ.7: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರ ಬಳಿ ದೂರು ನೀಡಲು ಹೋಗಿರಲಿಲ್ಲ. ಬದಲಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆ ಕೇಳಲು ಹೋಗಿದ್ದೆ ಎಂದು ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಸ್ಪಷ್ಟನೆ ನೀಡುವ ಮೂಲಕ ತಮ್ಮ ಹಾಗೂ ಸಿಎಂ ನಡುವಿನ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಈಗಲೂ ನಮ್ಮ ನಾಯಕರು. ಅವರು ನನ್ನ ಮುಖ್ಯಮಂತ್ರಿ. ನಮ್ಮ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯಪಾಲ ವಿ.ಆರ್.ವಾಲಾ ಅವರ ಬಳಿ ಸ್ಪಷ್ಟನೆ ಕೇಳಲು ಹೋಗಿದ್ದೆ, ಹೊರತು ನಾನು ಯಾರ ವಿರುದ್ಧವೂ ದೂರು ಕೊಟ್ಟಿಲ್ಲ. ಇವೆಲ್ಲವೂ ಕೇವಲ ಊಹಾಪೋಹ ಅಷ್ಟೇ ಎಂದು ವಿವರಣೆ ನೀಡಿದರು.

ರಾಜ್ಯಪಾಲರು ಗುಜರಾತ್‍ನಲ್ಲಿ 18 ವರ್ಷ ಕಾಲ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಸ್ನೆಸ್ ಟ್ರಾನ್ಸಾಕ್ಷನ್ ಆಕ್ಟ್ ಪ್ರಕಾರ ಯಾವುದೇ ಇಲಾಖೆಗೆ ನಿಗದಿಪಡಿಸಿದ ಅನುದಾನವನ್ನು ಆಯಾ ಸಚಿವರೇ ಬಳಸಬೇಕೆಂಬ ನಿಯಮವಿದೆ. ಇದಕ್ಕೆ ಸಂಬಂಧಿಸಿದಂತೆ ನಾನು ಸ್ಪಷ್ಟನೆ ಕೇಳಲು ಅವರ ಬಳಿ ತೆರಳಿದ್ದೇನೆ ಹೊರತು ಉಳಿದಂತೆ ಯಾವ ದೂರನ್ನು ನಾನು ಅವರಿಗೆ ನೀಡಿಲ್ಲ ಎಂದು ಈಶ್ವರಪ್ಪ ಹೇಳಿದರು.

ನಾನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಪತ್ರ ಬರೆದಿದ್ದೆ. ನಮ್ಮ ಪಕ್ಷದವರ ಬಳಿ ದೂರು ಕೊಡುವ ಬದಲು ಎಚ್.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್ ಬಳಿ ಕೊಡಬೇಕಿತ್ತೇ? ಎಂದು ಪ್ರಶ್ನಿಸಿದ ಈಶ್ವರಪ್ಪ, ಮುಂದೆಯೂ ಬಿಎಸ್‍ವೈ ಅವರ ವಿರುದ್ಧ ದೂರು ಕೊಡುವುದಿಲ್ಲ. ಏನೇ ಇದ್ದರೂ ಪಕ್ಷದ ನಾಯಕರ ಗಮನಕ್ಕೆ ತಂದೇ ಕೆಲಸ ಮಾಡುತ್ತೇನೆ. ಎಂದಿಗೂ ಕೂಡ ಪಕ್ಷದ ಶಿಸ್ತು ಉಲ್ಲಂಘನೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ನನ್ನ ಜೀವನದಲ್ಲಿ ನಾನು ಎಂದಿಗೂ ಸ್ಫೊಟಗೊಳ್ಳುವುದಿಲ್ಲ. ನಾನು ಸತ್ಯ ಕಂಡಾಗ ಮುನ್ನುಗ್ಗುವೆ. ಕುತ್ತಿಗೆ ಕೂಯ್ದರೂ ನಾನು ದಾರಿ ತಪ್ಪುವವನಲ್ಲ ಎಂದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಎಂಬುದು ಕೇವಲ ಭ್ರಮೆ ಅಷ್ಟೆ. ಯಡಿಯೂರಪ್ಪನವರೇ ಅಧಿಕಾರದಲ್ಲಿ ಮುಂದುವರಿಯುತ್ತಾರೆ. ಶಾಸಕ ಯತ್ನಾಳ್ ಸುಖಾಸುಮ್ಮನೆ ಹಾದಿಬೀದಿಯಲ್ಲಿ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.

ಜ್ಞಾನಪೀಠ ಕೊಡಬೇಕು: ಸುಳ್ಳು ಹೇಳುವುದರಲ್ಲಿ, ಕಥೆ ಕಟ್ಟುವುದರಲ್ಲಿ ನೋಬೆಲ್ ಇಲ್ಲವೇ ಜ್ಞಾನಪೀಠ ಪ್ರಶಸ್ತಿಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಕೊಡಬೇಕು ಎಂದು ವ್ಯಂಗ್ಯವಾಡಿದ ಈಶ್ವರಪ್ಪ, ಸಿದ್ದರಾಮಯ್ಯನವರಿಗೆ ಮಾಡಲು ಏನೇನೂ ಕೆಲಸವಿಲ್ಲ. ಹೀಗಾಗಿ ಏನೇನೊ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News