ಮಡಿಕೇರಿ: ಬೆಂಕಿ ಹಚ್ಚಿ ಸಾಮೂಹಿಕ ಹತ್ಯೆ ಪ್ರಕರಣ; ಮಹಿಳೆ ಸಾವು, ಮೃತರ ಸಂಖ್ಯೆ 9ಕ್ಕೆ ಏರಿಕೆ

Update: 2021-04-07 14:59 GMT
ಕೊಲೆ ಆರೋಪಿ ಬೋಜ

ಮಡಿಕೇರಿ, ಎ.7: ಮುಗುಟಗೇರಿಯಲ್ಲಿ ನಡೆಸಿದ ಸಾಮೂಹಿಕ ದಹನ ಪ್ರಕರಣದಲ್ಲಿ ತೀವ್ರ ಸುಟ್ಟ ಗಾಯಗಳಿಂದ ಮೈಸೂರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪಣಿ ಎರವರ ಪಾಚೆ(65) ಬುಧವಾರ ಮುಂಜಾನೆ 3.35ರ ವೇಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಜೀವ ಕಳೆದು ಕೊಂಡವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಕೊಲೆ ಆರೋಪಿ ಬೋಜ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಪ್ರಕರಣದಲ್ಲಿ ಸತ್ತವರ ಸಂಖ್ಯೆ ಒಟ್ಟು 9ಕ್ಕೆ ಏರಿಕೆಯಾಗಿದೆ.

ಮೃತಪಟ್ಟ ಮಹಿಳೆ ಪಾಚೆ ತೋಲನ ಪತ್ನಿ ಭಾಗ್ಯ ಎಂಬವರ ಅಜ್ಜಿಯಾಗಿದ್ದು, ಎ.3ರಂದು ಮುಗುಟಗೇರಿಯ ಮಂಜು ಎಂಬವರ ಲೈನ್‍ಮನೆಯಲ್ಲಿ ಇವರು ಕೂಡ ರಾತ್ರಿಯ ಗಾಢ ನಿದ್ದೆಯಲ್ಲಿದ್ದರು. ಮೂಲತಃ ಕೆದಮುಳ್ಳೂರು ಸಮೀಪದ ಬ್ಯಾರಿಕಾಡು ಪೈಸಾರಿಯಲ್ಲಿ ವಾಸವಿದ್ದ ಪಾಚೆ ಘಟನೆ ನಡೆದ ಶನಿವಾರದ ದಿನದಂದು ಮುಗುಟಗೇರಿ ಸಮೀಪದ ಲೈನ್ ಮನೆಯಲ್ಲಿ ವಾಸವಿರುವ ಸಂಬಂಧಿಯಾಗಿದ್ದ ಮಂಜುವಿನ ಮನೆಗೆ ಆಗಮಿಸಿದ್ದರು.

ಇವರ ಅಂತ್ಯ ಸಂಸ್ಕಾರ ಬುಧವಾರ ಹುಣಸೂರಿನಲ್ಲಿ ನೆರವೇರಿಸಲಾಗಿದೆ. ಪೆಟ್ರೋಲ್ ಸುರಿದು ಅಮಾಯಕರ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 4 ಮಕ್ಕಳು ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ. ಘಟನೆಯ ನಂತರ ಆರೋಪಿ ಬೋಜ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News