ಯತ್ನಾಳ್, ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಲಾಗದ ನಳಿನ್ ಕುಮಾರ್ ಅಸಮರ್ಥ ಅಧ್ಯಕ್ಷ: ಸಿದ್ದರಾಮಯ್ಯ

Update: 2021-04-07 16:22 GMT

ಬಸವಕಲ್ಯಾಣ, ಎ.7: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಸಚಿವ ಸಂಪುಟದ ಸದಸ್ಯರ ವಿರುದ್ಧ ಬಹಿರಂಗವಾಗಿಯೇ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಸಚಿವ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಅಸಮರ್ಥ ಪಕ್ಷಾಧ್ಯಕ್ಷರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ ತಿಂಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪದಚ್ಯುತಿಗೊಳ್ಳಲಿದ್ದಾರೆ ಎಂದು ಯತ್ನಾಳ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಸಂಪುಟದ ಹಿರಿಯ ಸಚಿವರಾಗಿರುವ ಈಶ್ವರಪ್ಪ, ಸಿಎಂ ವಿರುದ್ಧ ರಾಜ್ಯಪಾಲರಿಗೆ ಲಿಖಿತ ದೂರನ್ನೆ ನೀಡಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದೇ, ಕೈಕಟ್ಟಿ ಕುಳಿತಿರುವ ನಳಿನ್‍ ಕುಮಾರ್ ಕಟೀಲ್ ಅವರನ್ನು ಅಸಮರ್ಥ ಅಧ್ಯಕ್ಷ ಎನ್ನದೇ ಏನೆಂದು ಕರೆಯಬೇಕು ಎಂದರು.

ಬಿಜೆಪಿಯವರು ಬಿಂಬಿಸುತ್ತಿರುವಂತೆ ಕಾಂಗ್ರೆಸ್ ಪಕ್ಷದಲ್ಲಾಗಲಿ, ನನ್ನ ಹಾಗೂ ಡಿ.ಕೆ.ಶಿವಕುಮಾರ್ ನಡುವೆಯಾಗಲಿ ಯಾವುದೆ ಭಿನ್ನಾಭಿಪ್ರಾಯಗಳಿಲ್ಲ. ನಾವಿಬ್ಬರೂ ಜೊತೆ ಸೇರಿಯೇ ಉಪ ಚುನಾವಣೆಯ ಪ್ರಚಾರವನ್ನು ನಡೆಸುತ್ತಿದ್ದೇವೆ. ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷ ಸದಾ ಸಮಾಜದಲ್ಲಿರುವ ಬಡವರು, ಅಲ್ಪಸಂಖ್ಯಾತರು, ಯುವಕರು, ಶೋಷಿತರು, ಮಹಿಳೆಯರ ಕಲ್ಯಾಣಕ್ಕೆ ಶ್ರಮಿಸುತ್ತದೆ. ನಾವು ಅಹಿಂದ ವರ್ಗಗಳ ಪರವಾಗಿಯೇ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಈ ವರ್ಗಗಳ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲುವುದಿಲ್ಲ. ಅವರ ಪರವಾಗಿ ಕೆಲಸ ಮಾಡಿ ತೋರಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನೆ ಹಾಕುವುದಿಲ್ಲ ಎಂದು ಘೋಷಿಸಿದ್ದ ಜೆಡಿಎಸ್ ಇದೀಗ ಕೇವಲ ಬಸವಕಲ್ಯಾಣದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಯಾಕೆ? ಎಂದು ಪ್ರಶ್ನಿಸಿದ ಅವರು, ಮುಸ್ಲಿಮರ ಮತಗಳನ್ನು ವಿಭಜನೆ ಮಾಡಿ, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಈ ಎರಡು ಪಕ್ಷಗಳು ಒಳಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News