ಸೀಡಿ ಪ್ರಕರಣ: ನೆಗೆಟಿವ್ ವರದಿಗೂ ಮುನ್ನವೇ ರಮೇಶ್ ಜಾರಕಿಹೊಳಿ ಆಸ್ಪತ್ರೆಯಿಂದ ಬಿಡುಗಡೆ ?

Update: 2021-04-07 16:24 GMT

ಬೆಳಗಾವಿ, ಎ.7: ಅಶ್ಲೀಲ ಸೀಡಿ ಪ್ರಕರಣ ಸಂಬಂಧ ಪ್ರಮುಖ ಆರೋಪ ಹೊತ್ತಿರುವ ರಮೇಶ್ ಜಾರಕಿಹೊಳಿ ಅವರು ಕೊರೋನ ಸೋಂಕಿನ ನೆಗೆಟಿವ್ ವರದಿ ಫಲಿತಾಂಶ ಮುನ್ನವೇ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬುಧವಾರ ಇಲ್ಲಿನ ಗೋಕಾಕಿನ ಸರಕಾರಿ ಆಸ್ಪತ್ರೆಯಿಂದ ರಮೇಶ್ ಜಾರಕಿಹೊಳಿ ಅವರು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ ಎಂದು ಸ್ಥಳೀಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋವಿಡ್ ಜೊತೆಗೆ ರಮೇಶ್ ಜಾರಕಿಹೊಳಿ ದೇಹದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ಹೆಚ್ಚಾಗಿತ್ತು. ಈ ಕಾರಣಕ್ಕೆ ಮೂರು ದಿನಗಳ ಹಿಂದೆ ಅವರು ಗೋಕಾಕಿನ ಸರಕಾರಿ ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರ ದೇಹದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ಸಹಜ ಸ್ಥಿತಿಗೆ ಬಂದಿದ್ದು, ಮನೆಯಲ್ಲೇ ಕ್ವಾರಂಟೈನ್ ಆಗುವುದಾಗಿ ಹೇಳಿ ರಮೇಶ್ ಜಾರಕಿಹೊಳಿ ಬಿಡುಗಡೆ ಆಗಿದ್ದಾರೆ ಎನ್ನಲಾಗಿದೆ.

ಆದರೆ, ಕೋವಿಡ್ ವರದಿ ನೆಗೆಟಿವ್ ಬಂದಿಲ್ಲ. ಆದರೂ ನಾನು ಮನೆಯಲ್ಲಿ ಹೋಮ್ ಕ್ವಾರಂಟೈನ್ ಜತೆಗೆ ಕೋವಿಡ್ ಮಾರ್ಗಸೂಚಿ ಪಾಲಿಸುವುದಾಗಿ ಹೇಳಿ ಅವರು ಮನೆಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ರಮೇಶ್ ಜಾರಕಿಹೊಳಿ ಇನ್ನೂ 12 ದಿನ ಮನೆಯಲ್ಲಿಯೇ ಕ್ವಾರಂಟೈನ್ ಆಗಲಿದ್ದು, ಕೊರೋನ ವರದಿ ನೆಗೆಟಿವ್ ಬಂದ ನಂತರ ಅವರು ಮತ್ತಷ್ಟು ದಿನ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಬೆಳಗಾವಿಗೆ ಸಿಟ್: ಅತ್ಯಾಚಾರ ಪ್ರಕರಣದ ವಿಚಾರಣೆಗೆ ಗೈರಾಗಿದ್ದ ರಮೇಶ ಜಾರಕಿಹೊಳಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಸಿಟ್ ತಂಡ ಗೋಕಾಕ್ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿಯ ವೈದ್ಯಾಧಿಕಾರಿಯಿಂದಲೂ ಮಾಹಿತಿ ಸಂಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News