ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಶಿಕ್ಷಕನಿಂದ ಹಲ್ಲೆ: ಆರೋಪ

Update: 2021-04-07 16:31 GMT

ಪಾವಗಡ, ಎ.7: ಶುಲ್ಕ ಕಟ್ಟಿಲ್ಲ ಎಂದು ವಿ.ಎಸ್.ಸಂಸ್ಥೆಯ ಕಾರ್ಯದರ್ಶಿ ಹಾಗೂ ಶಿಕ್ಷಕ ಶಾಲೆಯ ವಿದ್ಯಾರ್ಥಿಗೆ ಮೈ ಮೇಲೆ ಬರೆ ಬರುವ ಹಾಗೆ ಹೊಡೆದ ಘಟನೆ ಪಾವಗಡದಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.

ಟ್ಯುಷನ್ ಪೀಸ್ ಐದು ಸಾವಿರ ರೂ.ಕಟ್ಟಿಲ್ಲ ಎಂದು ವಿ.ಎಸ್.ಕಾನ್ವೆಂಟ್ ಶಾಲೆಯ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಹಾಗೂ ಹಿಂದಿ ಶಿಕ್ಷಕ ರಾಮಕೃಷ್ಣ ನಾಯ್ಕ ಎಂಬವರು ವಿದ್ಯಾರ್ಥಿಗೆ ಮೈ ಮೇಲೆ ಬರೆ ಬರುವ ಹಾಗೆ ಹೊಡೆದಿದ್ದಾರೆ ಎಂದು ದೂರಲಾಗಿದೆ.

ಪಾವಗಡ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ವಿ.ಎಸ್.ಸಂಸ್ಥೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಮುಹಮ್ಮದ್ ತ್ವಲ್ಲಾ ತಂದೆ ಇತ್ತೀಚೆಗೆ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇದರಿಂದ ಕುಟುಂಬದ ನಿರ್ವಹಣೆ ಕಷ್ಟಕರವಾದ ಪರಿಸ್ಥಿತಿಯಲ್ಲಿ ಶಾಲೆಯ ಪೀಸ್ ಕಟ್ಟಲು ಹಣವಿಲ್ಲ, ಸ್ವಲ್ಪ ಸಮಯಾವಕಾಶ ನೀಡಿ ಎಂಬುದಾಗಿ ಹಲವು ಬಾರಿ ಶಿಕ್ಷಕರಿಗೆ ಹಾಗೂ ಸಂಸ್ಥೆಯ ಕಾರ್ಯದರ್ಶಿ ಗಮನಕ್ಕೆ ತರಲಾಗಿತ್ತು ಎಂದು ವಿದ್ಯಾರ್ಥಿಯ ಪೋಷಕರು ತಿಳಿಸಿದ್ದಾರೆ. ಈ ಹಿಂದೆಯೂ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೊಡೆದ ನಿದರ್ಶನಗಳಿವೆ ಎಂದು ಅವರು ಆರೋಪಿಸಿದ್ದಾರೆ.

ಎಲ್ಲ ವಿದ್ಯಾರ್ಥಿಗಳ ಮುಂದೆ ಪೀಸ್‌ಗಾಗಿ ಹೊಡೆದ ಕಾರಣ ಮನನೊಂದು ವಿದ್ಯಾರ್ಥಿ ಮನೆಗೆ ಬಂದು ಕೊಠಡಿಯೊಂದರಲ್ಲಿ ಚಿಲಕ ಹಾಕಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾನೆ. ತಕ್ಷಣವೇ ವಿದ್ಯಾರ್ಥಿಯ ಅಣ್ಣ ಬಾಗಿಲು ಒಡೆದು ರಕ್ಷಿಸಿದ್ದಾನೆ ಎಂದು ವಿದ್ಯಾರ್ಥಿ ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ತಾಲೂಕಿನಲ್ಲಿ ಇಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದು. ಆದುದರಿಂದ ಶಿಕ್ಷಣ ಇಲಾಖೆಯವರು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವ ಶಿಕ್ಷಕ ಹಾಗೂ ಕಾರ್ಯದರ್ಶಿ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪವನ್ ಕುಮಾರ್‌ಗೆ ವಿದ್ಯಾರ್ಥಿಯ ಅಣ್ಣ ಹಾಗೂ ತಾಯಿ ಮನವಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಯಕರ್ನಾಟಕ ತಾಲೂಕು ಅಧ್ಯಕ್ಷ ಗೋವರ್ಧನ, ವೈ.ಎಸ್.ಎಫ್ ಸಂಘದ ಅಧ್ಯಕ್ಷ ಗಗನ್ ರಾಜ್, ಚಿನ್ಮಯಿ ಸಂಸ್ಥೆಯ ಸತ್ಯ ಲೋಕೇಶ್, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಅಧ್ಯಕ್ಷ ಮೈಕಲ್ ನಾಡರ್, ಪಾವಗಡ ತಾಲೂಕು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷ ಇಮ್ರಾನ್ ಉಲ್ಲಾ, ಎಬಿವಿಪಿ ಅಧ್ಯಕ್ಷ, ಜಯಕರ್ನಾಟಕ ತಾಲೂಕು ಪ್ರಧಾನ ಕಾರ್ಯದರ್ಶಿ ಡಿ.ರಫೀಕ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News