ಅರಾಜಕತೆ ಸೃಷ್ಟಿಸುವುದು ನಾಯಕತ್ವದ ಲಕ್ಷಣವಲ್ಲ: ಕೋಡಿಹಳ್ಳಿ ವಿರುದ್ದ ಸಿ.ಟಿ.ರವಿ ವಾಗ್ದಾಳಿ

Update: 2021-04-07 17:17 GMT

ಚಿಕ್ಕಮಗಳೂರು, ಎ.7: ಅರಾಜಕತೆ ಸೃಷ್ಟಿಸುವುದು, ರೈತರು ಹಾಗೂ ಕಾರ್ಮಿಕರನ್ನು ಎತ್ತಿಕಟ್ಟುವುದು ನಾಯಕತ್ವದ ಲಕ್ಷಣವಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಇಷ್ಟು ದಿನಗಳ ಕಾಲ ರೈತನಾಯಕ ಎಂದು ಬಿಂಬಿಸಿಕೊಂಡಿದ್ದರು. ಇದೀಗ ಕಾರ್ಮಿಕ ನಾಯಕರಾಗಲು ಮುಂದಾಗಿದ್ದಾರೆ. ಸರಕಾರ ತೆಗೆದುಕೊಂಡ ತೀರ್ಮಾನಗಳನ್ನು ವಿರೋಧಿಸುವುದು ಇವರ ಕೆಲಸವಾಗಿದೆ. ಕೃಷಿ ಮಸೂದೆಗಳನ್ನು ರೈತ ವಿರೋಧಿ ಮಸೂದೆ ಎಂದು ಬಿಂಬಿಸಿದ್ದಾರೆ. ಮುಖಂಡರಾದವರು ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಬೇಡಿಕೆ ಈಡೇರಿಕೆಗೆ ಮುಂದಾಗಬೇಕು ಎಂದ ಅವರು, ಅತೀ ಒತ್ತಡದ ಸಂಬಂಧಗಳು ಹರಿದು ಹೋಗುವಂತೆ ಮಾಡುತ್ತದೆ ಎಂದರು.

ಕೋವಿಡ್ ಆರ್ಥಿಕ ಸಂಕಷ್ಟದಲ್ಲೂ ಸರಕಾರ ಸಾರಿಗೆ ನೌಕರರಿಗೆ ವೇತನ ನೀಡಿದೆ. ಅವರ ಹಿತ ಕಾಯಲು ಬದ್ಧವಾಗಿದೆ. ಸರಕಾರಕ್ಕಿಂತ ದೊಡ್ಡವರು ಯಾರೂ ಇಲ್ಲ. ಬೆದರಿಕೆ ಮೂಲಕ ಸರಕಾರವನ್ನು ಮಣಿಸೋದು ಅಸಾಧ್ಯ. ಸರಕಾರ ಜಾರಿಗೊಳಿಸಲು ಮುಂದಾಗಿರುವ ಕೃಷಿ ಮಸೂದೆಗಳು ರೈತಪರವಾಗಿದೆ. ರೈತರ ಪರವಾಗಿ ಸರಕಾರ ತೆಗೆದುಕೊಂಡ ತೀರ್ಮಾನಗಳನ್ನು ರೈತ ವಿರೋಧಿ ಎನ್ನುತ್ತಿದ್ದಾರೆ. ಒಟ್ಟಾರೆ ಜನಪರ ಸರಕಾರದ ವಿರುದ್ಧ ಹುನ್ನಾರ ಮಾಡುವುದು ಇವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಾರಿಗೆ ಸಚಿವರು ನೌಕರರ ಜೊತೆ ಮಾತನಾಡಲು ಸಮಯ ಕೇಳಿದ್ದಾರೆ. ಕೊರೋನ ಜೊತೆ ಉಪಚುನಾವಣೆ ನೀತಿ ಸಂಹಿತೆ ಇರುವ ಹಿನ್ನೆಲೆ ನೌಕರರು ತಿಂಗಳ ಸಮಯಾವಕಾಶ ಕೊಟ್ಟು ನೋಡುವುದು ಒಳಿತು. ನೌಕರರು ಮುಷ್ಕರವನ್ನು ಹಿಂಪಡೆಯಬೇಕೆಂದು ಇದೇ ವೇಳೆ ರವಿ ಮನವಿ ಮಾಡಿದರು.

ನಾನೂ ಗೌರಿ ಎಂದವರು ಎಲ್ಲಿ ಹೋದರು?

ಎಡಪಂಥೀಯ ನಿಲುವುಗಳಿಂದ ಪ್ರೇರಣೆ ಪಡೆದ ಜನರು ಛತ್ತೀಸಗಡದಲ್ಲಿ 27ಜನ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಇದು ದುರಾದೃಷ್ಟಕರ ಸೈನಿಕರಿಗೆ ಶತ್ರು ಆದವರು ದೇಶಕ್ಕೂ ಶತ್ರುಗಳೇ, ಯಾರು ಸಂವಿಧಾನವನ್ನು ನಂಬುವುದಿಲ್ಲವೋ ಅವರು ಬ್ಯಾಲೆಟ್ ಮೇಲೆ ನಂಬಿಕೆ ಇಡಲು ಸಾಧ್ಯವಿಲ್ಲ, ಬುಲೆಟ್‍ ಮೇಲೆ ನಂಬಿಕೆ ಇರುವವರಿಗೆ ಸಂವಿಧಾನದ ಮೇಲೆ ನಂಬಿಕೆ ಇರುವುದಿಲ್ಲ, ಸೈನಿಕರನ್ನು ಶತ್ರು ಎಂದು ಪರಿಗಣಿಸುವರು ದೇಶದಲ್ಲಿ ಇರುವುದಕ್ಕೆ ಅರ್ಹತೆ ಪಡೆದಿಲ್ಲ. ನಾನು ಗೌರಿ ಎಂದು ಮೊಂಬತ್ತಿ ಹಿಡಿದವರು 27 ಜನ ಸೈನಿಕರು ಸತ್ತಾಗ ಏಕೆ ಮೊಂಬತ್ತಿ ಹಿಡಿಯಲಿಲ್ಲ ಎಂದು ಪ್ರಶ್ನಿಸಿದರು.

ಬಿ.ಎಸ್.ಯಡಿಯೂರಪ್ಪ ಹಾಗೂ ಯತ್ನಾಳ್ ಸಂಬಂಧ ಚೆನ್ನಾಗಿದೆ. ಯತ್ನಾಳ್ ಸ್ವಭಾವದ ಬಗ್ಗೆ 2018ರಲ್ಲಿ ಟಿಕೆಟ್ ನೀಡುವಾಗ ಚರ್ಚೆಯಾಗಿತ್ತು. ಆಗ ಯತ್ನಾಳ್ ಪರ ಬಿ.ಎಸ್.ಯಡಿಯೂರಪ್ಪ ಸಮರ್ಥನೆ ಮಾಡಿ ಮಾತನಾಡಿದ್ದರು. ಅವರ ವ್ಯಕ್ತಿಗತ ಸಂಬಂಧ ಚೆನ್ನಾಗಿದೆ. ಯತ್ನಾಳ್ ಆರೋಪ, ಟೀಕೆ ಪಕ್ಷದ ಆಂತರಿಕ ವಿಚಾರ. ಎಲ್ಲವನ್ನು ಸಿಎಂ ಸರಿ ಮಾಡುತ್ತಾರೆ.

- ಸಿಟಿ ರವಿ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News