ಬಸವಕಲ್ಯಾಣದಲ್ಲಿ ಜೆಡಿಎಸ್- ಬಿಜೆಪಿ ಒಳ ಒಪ್ಪಂದ: ಝಮೀರ್ ಅಹ್ಮದ್ ಆರೋಪ

Update: 2021-04-07 17:24 GMT

ಬಸವಕಲ್ಯಾಣ, ಎ.7: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಜೆಡಿಎಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದು, ಬಿಜೆಪಿ ಅಭ್ಯರ್ಥಿಯ ಗೆಲುವಿಗಾಗಿ ಜೆಡಿಎಸ್ ಕಣಕ್ಕಿಳಿದಿದೆ ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಆರೋಪಿಸಿದರು.

ಬುಧವಾರ ನಗರದ ಹೊರವಲಯದಲ್ಲಿರುವ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಮುಸ್ಲಿಮ್ ಸಮುದಾಯದ ಬಗ್ಗೆ ನಿಜವಾಗಿಯೂ ಅನುಕಂಪವಿದ್ದರೆ, ಜೆಡಿಎಸ್ ಪಕ್ಷದ ಪ್ರಾಬಲ್ಯವಿರುವ ಹಾಸನ, ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಿ ಗೆಲ್ಲಿಸಲಿ ಎಂದು ಸವಾಲು ಹಾಕಿದರು.

ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯುವುದಿಲ್ಲ ಎಂದು ಈ ಹಿಂದೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಪ್ರಕಟಿಸಿದ್ದರು. ಆದರೆ, ಈಗ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಕುಮಾರಸ್ವಾಮಿ ಬಿಜೆಪಿ ಬಳಿ 10 ಕೋಟಿ ರೂ.ಗಳ ವ್ಯವಹಾರ ಮಾಡಿ, ಮುಸ್ಲಿಮ್ ಸಮುದಾಯದ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ ಎಂದು ಅವರು ದೂರಿದರು.

ಜೆಡಿಎಸ್ ಗೆಲ್ಲುವ ಕಡೆ ಅಲ್ಪಸಂಖ್ಯಾತರು ನೆನಪಾಗುವುದಿಲ್ಲ. ಎಲ್ಲಿ ಸೋಲುತ್ತಾರೋ ಅಲ್ಲಿ ಅಲ್ಪಸಂಖ್ಯಾತರ ಮೇಲೆ ಇವರಿಗೆ ಪ್ರೀತಿ ಉಕ್ಕುತ್ತದೆ. ಅದೇ ರೀತಿ, ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಅವರ ಎಂಐಎಂ ಪಕ್ಷವು ತನ್ನ ಅಭ್ಯರ್ಥಿಯನ್ನು ಹಾಕಿದೆ. ಆದರೆ, ಇಲ್ಲಿ ಅವರ ಆಟ ನಡೆಯುವುದಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಬಜೆಟ್‍ನಲ್ಲಿ 3,150 ಕೋಟಿ ರೂ. ಅನುದಾನ ನೀಡಿದ್ದರು. ಆದರೆ, ಕುಮಾರಸ್ವಾಮಿ ಸಿಎಂ ಆದಾಗ ಈ ಅನುದಾನದ ಪ್ರಮಾಣವನ್ನು 1,800 ಕೋಟಿ ರೂ.ಗೆ ಇಳಿಸಿದರು. ಬಿಜೆಪಿ ಜೊತೆ ಕೈ ಜೋಡಿಸಿ ಗೋಹತ್ಯೆ ನಿಷೇಧ ವಿಧೇಯಕ ವಿಧಾನಮಂಡಲದಲ್ಲಿ ಅನುಮೋದನೆ ಪಡೆದುಕೊಳ್ಳಲು ಕುಮಾರಸ್ವಾಮಿ ಸಹಕರಿಸಿದರು ಎಂದು ಅವರು ದೂರಿದರು.

ಬಸವಕಲ್ಯಾಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ಬಿ.ನಾರಾಯಣ ರಾವ್, ತಮ್ಮ ನಿರಂತರ ಹೋರಾಟದ ಫಲವಾಗಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. ಆದರೆ, ದುರಾದೃಷ್ಟವಶಾತ್ ನಾವು ಅವರನ್ನು ಕಳೆದುಕೊಂಡು ಬಿಟ್ಟೆವು. ಇದೀಗ ಅವರ ಧರ್ಮ ಪತ್ನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಮತದಾರರು ಅವರನ್ನು ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರದ ಆಡಳಿತ ವೈಖರಿಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಸಿದ್ದರಾಮಯ್ಯ ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News