ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ

Update: 2021-04-07 17:30 GMT
ಕೆ.ಎನ್.ರಮೇಶ್

ಚಿಕ್ಕಮಗಳೂರು, ಎ.7: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕೂಟದ ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಂಡ ಪ್ರಕ್ರಿಯೆ ಸಂಹಿತೆ ಕಲಂ 144 ಅನ್ವಯ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.

ಮುಷ್ಕರದ ಅವಧಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಆಸ್ತಿ-ಪಾಸ್ತಿ ಮತ್ತು ವಾಹನಗಳಿಗೆ ಹಾನಿಯುಂಟಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಸಾರ್ವಜನಿಕರು ಅಥವಾ ಪ್ರಯಾಣಿಕರಿಗೆ ಅನಾನೂಕೂಲ ಉಂಟಾಗದಂತೆ ಮತ್ತು ಪರ್ಯಾಯ ವ್ಯವಸ್ಥೆಯನ್ನು ಮಾಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಮಗಳೂರು ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿಗೆ ಕೋರಿರುವ ಹಿನ್ನೆಲೆಯಲ್ಲಿ ಮುಷ್ಕರದ ಅವಧಿಯಲ್ಲಿ ಸಾರಿಗೆ ವ್ಯವಸ್ಥೆ ಲಭ್ಯವಿಲ್ಲದ ಸಂದರ್ಭದಲ್ಲಿ ಈ ಮಾರ್ಗಗಳಲ್ಲಿ ಸೇವೆ ಸಲ್ಲಿಸುವ ಖಾಸಗಿ ವಾಹನಗಳು/ ಖಾಸಗಿ ವಾಹನಗಳ ಸಿಬ್ಬಂದಿ ಹಾಗೂ ಪ್ರಯಾಣಿಕರು ಸಂಚರಿಸುವ ಸಂದರ್ಭದಲ್ಲಿ ಖಾಸಗಿ ಬಸ್ ನಿಲ್ದಾಣ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಡಿಪೋ, ವರ್ಕ್‍ಶಾಪ್ ಮತ್ತು ಬಸ್ ನಿಲ್ದಾಣಗಳಲ್ಲಿ ಕೆಲವು ಕಿಡಿಗೇಡಿಗಳು ಸಾರ್ವಜನಿಕರ ಆಸ್ತಿ- ಪಾಸ್ತಿ ಮತ್ತು ವಾಹನಗಳಿಗೆ ಹಾನಿ ಉಂಟು ಮಾಡಿ ಸಾರ್ವಜನಿಕರ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗವುಂಟು ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಆದ್ದರಿಂದ ಸಾರ್ವಜನಿಕರು ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ದಂಡ ಪ್ರಕ್ರಿಯೆ ಸಂಹಿತೆ ಕಲಂ 144ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಎ.7ರಂದು ಬೆಳಗ್ಗೆ 6ರಿಂದ ಮುಂದಿನ ಆದೇಶದವರೆಗೂ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ತರೀಕೆರೆ, ಕಡೂರು, ಅಜ್ಜಂಪುರ, ಬಸ್ ನಿಲ್ದಾಣಗಳ ಸ್ಥಳಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಿಷೇಧಿತ ಪ್ರದೇಶ ಮತ್ತು ಅವಧಿಯಲ್ಲಿ ವಿಧಿಸಿರುವ ನಿಬಂಧನೆಗಳು: ಶಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಈಟಿಗಳು, ಗದೆಗಳು ಬಂದೂಕುಗಳು, ಚಾಕುಗಳು, ಕೋಲುಗಳು ಅಥವಾ ಲಾಠಿಗಳನ್ನು ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವುದನ್ನು, ಪಟಾಕಿ/ ಸಿಡಿಮದ್ದುಗಳನ್ನು ಸಿಡಿಸುವುದು, ಯಾವುದೇ ಕ್ಷಾರಕ ಪದಾರ್ಥ ಅಥವಾ ಸ್ಫೋಟಕಗಳನ್ನು ಒಯ್ಯುವುದನ್ನು ,ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ/ರಾಜಕೀಯ ಸಭೆ, ಸಮಾರಂಭಗಳನ್ನು ನಡೆಸುವುದನ್ನು, ಕಲ್ಲುಗಳು ಅಥವಾ ಇತರ ಕ್ಷಿಪಣಿಗಳನ್ನು ಎಸೆಯುವ ಅಥವಾ ವೇಗದಿಂದ ವಗೆಯುವ ಸಾಧನಗಳ ಅಥವಾ ಉಪಕರಣಗಳ ಒಯ್ಯುವಿಕೆಯನ್ನು ಶೇಖರಿಸುವಿಕೆಯನ್ನು ಮತ್ತು ತಯಾರಿಸುವುದನ್ನು ವ್ಯಕ್ತಿಗಳ ಅಥವಾ ಅವರ ಶವಗಳ ಅಥವಾ ಆಕೃತಿಗಳ ಅಥವಾ ಆಕೃತಿಗಳ ಅಥವಾ ಪ್ರತಿಕೃತಿಗಳ ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ,

ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಬಾಧೆಯನ್ನುಂಟು ಮಾಡುಬಹುದಾದ ಅಥವಾ ರಾಜ್ಯದ ಭದ್ರತೆಯನ್ನು ಕುಗ್ಗಿಸಬಹುದಾದ ಅಥವಾ ಅಪರಾಧವನ್ನು ಮಾಡಲು ಪ್ರಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಕೂಗುವುದು ಹಾಡುಗಳನ್ನು ಹಾಡುವುದು, ಸಂಗೀತವನ್ನು ನುಡಿಸುವುದು, ಆವೇಶಭರಿತ ಭಾಷಣ ಮಾಡುವುದು ಇಂಗಿತ ಸೂಚನೆಗಳ ಅಥವಾ ಅಂಕ ನಿರೂಪಣೆಗಳನ್ನು ಉಪಯೋಗ ಮಾಡುವುದು ಮತ್ತು ಚಿತ್ರಗಳನ್ನು ಸಂಕೇತಗಳನ್ನು, ಭಿತ್ತಿಪತ್ರಗಳನ್ನು ಅಥವಾ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ತಯಾರಿಸುವುದು ಪ್ರದರ್ಶಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದ್ದು, ನಿಬಂಧನೆಗಳು ನಿಷೇದಾಜ್ಞೆ ಜಾರಿಗೊಳಿಸಲಾದ ಪ್ರದೇಶಗಳಲ್ಲಿ ಪ್ರಯಾಣಿಕರು ಮತ್ತು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಿಬ್ಬಂದಿಗೆ ಅನ್ವಯಿಸುವುದಿಲ್ಲ. ನಿಬಂಧನೆಗಳು ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟನೆಯಲ್ಲಿ ಡಿಸಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News