ಕೊರೋನ ಸೋಂಕು ಹೆಚ್ಚಳ: ನಿರ್ದೇಶನಗಳನ್ನು ಪಾಲಿಸುವಂತೆ ಸರಕಾರ, ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

Update: 2021-04-07 18:04 GMT

ಬೆಂಗಳೂರು, ಎ.7: ರಾಜ್ಯದಲ್ಲಿ ಕೊರೋನ ಸೋಂಕು ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಹಿಂದೆ ನೀಡಿರುವ ನಿರ್ದೇಶನಗಳನ್ನು ಪಾಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರ ಹಾಗೂ ಬಿಬಿಎಂಪಿಗೆ ನಿರ್ದೇಶನ ನೀಡಿದೆ.

ಕೋವಿಡ್ ನಿಯಂತ್ರಣ, ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ಪೀಠ, ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕೊರೋನ ಸೋಂಕು ಪ್ರತಿ ದಿನ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಹಿಂದಿನ ವಿಚಾರಣೆಗಳ ವೇಳೆ ನೀಡಿರುವ ನಿರ್ದೇಶಗಳನ್ನು ಸರಕಾರ, ಬಿಬಿಎಂಪಿ ಪಾಲಿಸಬೇಕು ಎಂದು ನಿರ್ದೇಶನ ನೀಡಿತು.

ಸಾರ್ವಜನಿಕರು ಒಟ್ಟಿಗೆ ಸೇರುವಂತಹ ಹೋಟೆಲ್, ರೆಸ್ಟೋರೆಂಟ್, ದೇವಸ್ಥಾನ, ಮಾರ್ಕೆಟ್ ಮತ್ತಿತರೆ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಗಳನ್ನು ಒದಗಿಸುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಿಬಿಎಂಪಿ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು.

ಇನ್ನು ಥಿಯೇಟರ್, ಜಿಮ್, ಕ್ಲಬ್‍ಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಸರಕಾರ ಹೊರಡಿಸಿರುವ ಮಾರ್ಗಸೂಚಿ ಬಗ್ಗೆ ಅರ್ಜಿದಾರರು ಆಕ್ಷೇಪಿಸಿದ್ದು, ಮುಂದಿನ ವಿಚಾರಣೆ ವೇಳೆ ಸರಕಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿರುವ ಆದೇಶವನ್ನು ಹಾಜರುಪಡಿಸುವಂತೆ ಸೂಚಿಸಿತು.

ಖಾಸಗಿ ಕಾರ್ಯಕ್ರಮಗಳನ್ನು ನಡೆಸುವ ಸಂಬಂಧ ಸರಕಾರ ಹೊರಡಿಸಿರುವ ಆದೇಶ ಸರಿ ಎನ್ನಿಸುತ್ತಿಲ್ಲ. ಹಾಲ್‍ಗಳಲ್ಲಿ 200 ಕ್ಕೂ ಹೆಚ್ಚು ಜನ ಸೇರಬಾರದು, ಹೊರಾಂಗಣ ಅಥವಾ ತೆರೆದ ಪ್ರದೇಶದಲ್ಲಿ 500ಕ್ಕಿಂತ ಹೆಚ್ಚು ಜನ ಸೇರಬಾರದು ಎಂದು ಹೊರಡಿಸಿರುವ ಆದೇಶದಲ್ಲಿ ಜಾಗ ಎಷ್ಟಿರಬೇಕೆಂಬ ಕುರಿತು ನಿಖರತೆ ಇಲ್ಲ. ಹೀಗಾಗಿ ಈ ಆದೇಶವನ್ನು ಸರಕಾರ ಪರಿಷ್ಕರಿಸಬೇಕು. ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‍ಗಳ ಮಾಹಿತಿಯನ್ನು ಈ ಹಿಂದೆ ನ್ಯಾಯಾಲಯ ನೀಡಿರುವ ನಿರ್ದೇಶನದಂತೆ ಸಾರ್ವಜನಿಕವಾಗಿ ಲಭ್ಯವಾಗುವಂತೆ ಕ್ರಮ ಜರುಗಿಸಬೇಕು ಎಂದು ಸೂಚಿಸಿತು.

ವಕೀಲರಿಗೂ ಕೋವಿಡ್ ಸೋಂಕು ಹಬ್ಬುತ್ತಿರುವುದರಿಂದ ಕೇಸುಗಳನ್ನು ಮುಂದೂಡಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೀಠ, ವಕೀಲರಿಗೆ ಸಮೂಹ ವಿಮೆ ಒದಗಿಸುವ ಸಂಬಂಧ ವಿಮಾ ಕಂಪನಿಗಳೊಂದಿಗೆ ಮಾತುಕತೆ ನಡೆಸಲು ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News