ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಆತ್ಮಹತ್ಯೆಗೆ ಯತ್ನ
ಕೋಲಾರ, ಎ.8: ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಚೈತ್ರಾ ಕೊಟೂರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಕೋಲಾರ ನಗರ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗ್ಗೆ 5 ಗಂಟೆಗೆ ಚೈತ್ರಾ ಕೊಟೂರು ವಿಷ ಸೇವಿಸಿದ್ದು, ವಿಷಯ ತಿಳಿದ ಮನೆಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೋಲಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೈತ್ರಾ, ಮದುವೆ ಆದ ಹುಡುಗ ಕೈಕೊಟ್ಟಿರುವ ಹಿನ್ನೆಲೆ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ ಚೈತ್ರಾ, ಇಂದು ಕೋಲಾರದ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪತಿ ನಾಗಾರ್ಜುನ್ ಜೊತೆಗೆ ಕೌಟುಂಬಿಕ ಕಲಹದಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಚೈತ್ರಾ ಮಂಡ್ಯ ಮೂಲದ ಉದ್ಯಮಿ ನಾಗಾರ್ಜುನ್ ಜೊತೆಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಮಾರ್ಚ್ 28 ರಂದು ಮದುವೆಯಾಗಿದ್ದರು. ಮದುವೆಯಾದ ದಿನವೇ ಚೈತ್ರ ಇಷ್ಟವಿಲ್ಲ ಎಂದು ವಾಪಾಸ್ ಹೋಗಿದ್ದ ಪತಿ ನಾಗಾರ್ಜುನ್, ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಮಾತುಕತೆಗೆ ಬರುವುದಾಗಿ ಹೇಳಿದ್ದ. ಆದರೆ ನಾಗಾರ್ಜುನ್ ಹಾಗೂ ಪೋಷಕರು ಮಾತುಕತೆಗೆ ಬಾರದೆ ನಿರ್ಲಕ್ಷ್ಯ ಮಾಡಿದ್ದಕ್ಕೆ ಚೈತ್ರಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಸದ್ಯ ಚೈತ್ರಾ ಕೊಟೂರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಚೈತ್ರಾ ಕೊಟೂರು ತಂದೆ ನಾರಾಯಣಪ್ಪ ತಿಳಿಸಿದ್ದಾರೆ.