ಅಗತ್ಯ ಬಿದ್ದರೆ ಸೇನೆಯಿಂದ ಚಾಲಕರನ್ನು ಕರೆತರುತ್ತೇವೆ: ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಝ್

Update: 2021-04-08 13:09 GMT

ಬೆಂಗಳೂರು, ಎ.8: ರಾಜ್ಯ ರಸ್ತೆ ಸಾರಿಗೆ ನೌಕರರ ಅನಿರ್ದಿಷ್ಟಾವಧಿಯ ಮುಷ್ಕರದಿಂದ ಸಾರ್ವಜನಿಕರಿಗೆ ಉಂಟಾಗುವ ತೊಂದರೆ ತಪ್ಪಿಸಲು ಅಗತ್ಯ ಬಿದ್ದರೆ ಸೇನೆಯಿಂದ ಚಾಲಕರನ್ನು ಕರೆತರುತ್ತೇವೆ ಎಂದು ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಝ್ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಯಾಣಿಕರಿಗೆ ತೊಂದರೆಯಾಗದಂತೆ ಮುಷ್ಕರ ನಡೆಸಬೇಕು. ಅದನ್ನು ಬಿಟ್ಟು ಹೀಗೆ ಅನಿರ್ದಿಷ್ಟಾವಧಿಯ ಮುಷ್ಕರ ನಡೆಸಿ ಸಾರ್ವಜನಿಕರಿಗೆ ತೊಂದರೆ ಮಾಡಬಾರದು. ಈ ರೀತಿ ಯಾವುದೇ ಪ್ರತಿಭಟನೆ ಈ ಹಿಂದೆ ನಡೆಸಿಲ್ಲ. ಒಂದು ವೇಳೆ ಅಗತ್ಯ ಬಿದ್ದರೆ ಸೇನೆಯಿಂದ ಚಾಲಕರನ್ನು ಕರೆತರುತ್ತೇವೆ ಎಂದು ನುಡಿದರು,

ಗುರುವಾರ ಬೆಳಗ್ಗೆ 11 ಗಂಟೆಯವರೆಗೆ ಕೆಎಸ್ಸಾರ್ಟಿಸಿ 77 ಬಸ್, ಬಿಎಂಟಿಸಿ 42, ಎನ್‍ಇಕೆಆರ್‍ಟಿಸಿ 76 ಹಾಗೂ ಎನ್‍ಡಬ್ಲ್ಯೂ ಕೆಆರ್‍ಟಿಸಿ 15 ಬಸ್‍ಗಳು ಸಂಚರಿಸಿವೆ. ಗೃಹ ಸಚಿವರು ಕೂಡ ಕರ್ತವ್ಯಕ್ಕೆ ಹಾಜರಾಗುವ 'ಸಾರಿಗೆ ಸಿಬ್ಬಂದಿ’ಗೆ ರಕ್ಷಣೆ ನೀಡಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಹೀಗಿದ್ದೂ ಸಾರಿಗೆ ನೌಕರರು ಮಾತ್ರ ಮುಷ್ಕರದಿಂದ ಹಿಂದೆ ಸರಿಯುತ್ತಿಲ್ಲ ಎಂದರು.

ರಾಜ್ಯ ಸರಕಾರ ಮುಷ್ಕರದಿಂದಾಗಿ ಪ್ರಯಾಣಿಕರಿಗೆ ಆಗುತ್ತಿರುವಂತ ಸಮಸ್ಯೆ ಪರಿಹರಿಸಲು ಮುಂದಾಗುತ್ತಿದೆ. ಅದಕ್ಕಾಗಿ 2 ವರ್ಷಗಳ ಹಿಂದೆ ಸಾರಿಗೆ ಇಲಾಖೆಯಿಂದ ನಿವೃತ್ತರಾಗಿರುವ ನೌಕರರ ಪಟ್ಟಿಯನ್ನು ಮಾಡಲಾಗುತ್ತಿದೆ. ಆ ನೌಕರರನ್ನು ಮತ್ತೆ ಕರೆಸಿ, ಸಾರಿಗೆ ಬಸ್ ಸಂಚಾರ ಯಥಾಸ್ಥಿತಿಗೆ ತರುವಂತ ಪ್ರಯತ್ನಕ್ಕೂ ಚಿಂತನೆ ನಡೆಸಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News