×
Ad

'ಕೆಎಚ್‌ಬಿ ವಂಚನೆ' ಆರೋಪದ ಬಗ್ಗೆ ಸಿನಿಮಾ ನಿರ್ಮಾಪಕ ಹರಿಪ್ರಸಾದ್ ಸ್ಪಷ್ಟನೆ

Update: 2021-04-08 17:16 IST

ಬೆಂಗಳೂರು, ಎ.8: ಕರ್ನಾಟಕ ಗೃಹ ಮಂಡಳಿಯಲ್ಲಿ (ಕೆಎಚ್‌ಬಿ) ನಿವೇಶನ ಕೊಡಿಸುವ ಹೆಸರಿನಲ್ಲಿ ಯಾರಿಗೂ ವಂಚನೆ ಮಾಡಿಲ್ಲ. ರಾಜಕೀಯ ಬೆಳವಣಿಗೆ ಸಹಿಸಲಾಗದ ಕಿಡಿಗೇಡಿಗಳು ನನ್ನ ವಿರುದ್ಧ ಉದ್ದೇಶ ಪೂರಕವಾಗಿಯೇ ಷಡ್ಯಂತ್ರ ನಡೆಸಿದ್ದಾರೆ ಎಂದು ಸಿನಿಮಾ ನಿರ್ಮಾಪಕ‌ ಹರಿಪ್ರಸಾದ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿನಿಮಾ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಿದ್ದೇ.ಜತೆಗೆ, ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದೆ. ಇದನ್ನು ಸಹಿಸದ ಪಟ್ಟಭದ್ರ ಹಿತಾಸಕ್ತಿಗಳೇ ನನ್ನ ವಿರುದ್ಧ ಆರೋಪಗಳನ್ನು ಹೊರಿಸಿ, ಅಪಪ್ರಚಾರ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಿನಿಮಾ ರಂಗಕ್ಕೆ ಹೊಸ ಕಲಾವಿದರನ್ನು ಪರಿಚಯಿಸಬೇಕು. ಸಿನಿಮಾ ರಂಗ ಮತ್ತಷ್ಟು ಬೆಳೆಯಬೇಕೆಂಬ ಕಾರಣಕ್ಕಾಗಿ ನಿರ್ಮಾಪಕನಾದೆ. ಅದರಂತೆ, ಹಲವು ಸಿನಿಮಾಗಳಿಗೆ ನಿರ್ಮಾಪಕನಾಗಿ, ಕಲಾರಂಗದಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದರು.

ನನ್ನ ಮೇಲಿನ ಆರೋಪಗಳಿಂದ ಶೀಘ್ರದಲ್ಲೇ ಹೊರಬರುತ್ತೇನೆ. ಜೊತೆಗೆ, ನ್ಯಾಯಾಲಯದ ಮೇಲೆ ಅಪಾರ ನಂಬಿಕೆ ಇದ್ದು, ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಹರಿಪ್ರಸಾದ್ ಎಚ್ಚರಿಕೆ ನೀಡಿದರು.

ಕರ್ನಾಟಕ ಗೃಹ ಮಂಡಳಿಯಲ್ಲಿ (ಕೆಎಚ್‌ಬಿ) ನಿವೇಶನ ಕೊಡಿಸುವ ಹೆಸರಿನಲ ಅನಗತ್ಯ ಆರೋಪಗಳಿಂದ ಜೈಲು ಸೇರುವಂತೆ ಆಯಿತು. ಆದರೆ, ನನ್ನ ಕುಟುಂಬ, ಗೆಳೆಯರು ನನ್ನನ್ನು ಕೈಬಿಡಲಿಲ್ಲ. ಅವರು ಕೊಟ್ಟಿರುವ ಧೈರ್ಯದಿಂದಲೇ ಮುಂದೆ ಸಾಗುತ್ತಿದ್ದೇನೆ ಎಂದ ಅವರು, ಯಾರಿಗೂ ವಂಚನೆ ಮಾಡುವ ಮನಸ್ಸು ನನ್ನದಲ್ಲ. ಅಲ್ಲದೆ, ಹಲವು ಹಣವನ್ನು ನಾನು ಸಮಾಜ ಸೇವೆಗೆ ಮೀಸಲಿಟ್ಟು, ಸಮಸ್ಯೆಯಲ್ಲಿರುವವರಿಗೆ ಸ್ಪಂದಿಸಿದ್ದೇನೆ ಎಂದು ಭಾವುಕರಾದರು.

ನನ್ನಿಂದ ಸಹಾಯ ಪಡೆದ ವ್ಯಕ್ತಿಗಳಲ್ಲಿ ಕೆಲವರು ನನ್ನ ಏಳಿಗೆ ಸಹಿಸದೆ, ವಂಚನೆ ಷಡ್ಯಂತ್ರ ಮಾಡಿದ್ದಾರೆ. ಇಂತಹ ವ್ಯಕ್ತಿಗಳ ಜಾತಕ ನನ್ನ ಬಳಿಯೇ ಇದ್ದು, ಶೀಘ್ರದಲ್ಲೇ ಜನರ ಮುಂದೆ ಬಿಚ್ಚಿಡುವೆ ಎಂದು ಹರಿಪ್ರಸಾದ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News