ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗೆ ರಕ್ಷಣೆ: ಗೃಹ ಸಚಿವ ಬೊಮ್ಮಾಯಿ ಅಭಯ

Update: 2021-04-08 11:50 GMT

ಬೀದರ್, ಎ. 8: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸೇರಿದಂತೆ ಸಾರಿಗೆ ನೌಕರರು ಸ್ವಯಂ ಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾದರೆ, ಅವರಿಗೆ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಇಂದಿಲ್ಲಿ ಅಭಯ ನೀಡಿದ್ದಾರೆ.

ಗುರುವಾರ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ವಯಂ ಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು. ಅದು ನಮ್ಮ ಕೆಲಸ. ಅದನ್ನು ನಾವು ಮಾಡುತ್ತೇವೆ. ಈ ಸಂಬಂಧ ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚನೆಯನ್ನು ನೀಡಲಾಗಿದೆ ಎಂದು ತಿಳಿಸಿದರು.

ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಕಣ್ಣಿಗೆ ಕಾಣುತ್ತಿದೆ. ಜನ ಎಷ್ಟು ಪರಿತಪಿಸುತ್ತಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. ಮುಷ್ಕರದಿಂದ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿದೆ. ಸಾರಿಗೆ ಸಂಸ್ಥೆಗಳನ್ನು ಗಟ್ಟಿಗೊಳಿಸದೆ ಶಾಶ್ವತವಾಗಿ ನೌಕರರ ಹಿತ ಕಾಯುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಅರಿವಿದೆ. ಸಾರಿಗೆ ಸಂಸ್ಥೆಯು ಉಳಿಯಬೇಕು. ನೌಕರರಿಗೂ ಒಳ್ಳೆಯ ಸಂಬಳ ಸಿಗಬೇಕು. ಅದು ದುಡಿಮೆಯಿಂದ ಮಾತ್ರ ಸಾಧ್ಯ. ದುಡಿಮೆ ಇಲ್ಲದೆ ಅದು ಅಸಾಧ್ಯ ಎಂದು ಬಸವರಾಜ ಬೊಮ್ಮಾಯಿ ಹೇಳಿದರು

ಮುಷ್ಕರ ನಿರತ ಸಾರಿಗೆ ನೌಕರರಿಗೆ ಮಾನವೀಯತೆಯಿಂದ ಕಳಕಳಿಯ ಮನವಿ ಮಾಡುತ್ತೇನೆ. ಕೆಲಸಕ್ಕೆ ಹಾಜರಾಗಿ. ಜನಸಾಮಾನ್ಯರು ಸೇರಿದಂತೆ ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ

-ಬಸವರಾಜ್ ಬೊಮ್ಮಾಯಿ, ಗೃಹ ಸಚಿವ

ಸಾರಿಗೆ ಸಿಬ್ಬಂದಿಗೆ ಸೂಕ್ತ ಭದ್ರತೆ

ಮುಷ್ಕರದ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಗುರುವಾರ ನಗರದ ವಿವಿಧ ಬಸ್ ನಿಲ್ದಾಣಗಳು ಮತ್ತು ಬಸ್ ಘಟಕಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಬಸ್ ಹಾಗೂ ಇತರ ವಾಹನಗಳು ಸಂಚಾರ ನಡೆಯುತ್ತಿರುವುದರಿಂದ ಮುಷ್ಕರದಿಂದ ಜನ ಸಾಮಾನ್ಯರಿಗೆ ಹೆಚ್ಚಿನ ತೊಂದರೆಯಾಗಿಲ್ಲ ಎಂದರು.

ಕರ್ತವ್ಯಕ್ಕೆ ಹಾಜರಾಗುವ ಚಾಲಕರು, ನಿರ್ವಾಹಕರು ಸೇರಿದಂತೆ ನಿಗಮಗಳ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು. ಯಾವುದೇ ರೀತಿಯ ಬೆದರಿಕೆಗಳಿದ್ದರೆ ಪೊಲೀಸರಿಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ ಎಂದ ಅವರು, ಹೊರ ರಾಜ್ಯಗಳಿಗೆ ತೆರಳಲು ಸಿದ್ಧವಾಗಿದ್ದ ಬಸ್‍ಗಳ ಪ್ರಯಾಣಿಕರ ಜೊತೆಯೂ ಸಮಾಲೋಚನೆ ನಡೆಸಿದ್ದು, ಅವರಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News