ಸಾರಿಗೆ ನೌಕರರ ಮುಷ್ಕರ: ಎ.14ರವರೆಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಿದ ರೈಲ್ವೆ ಇಲಾಖೆ

Update: 2021-04-08 14:22 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.8: ರಾಜ್ಯ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಇಲಾಖೆಯು ಎ.8ರಿಂದ 14ರವರೆಗೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ.

ಯುಗಾದಿ ಸಮಯದಲ್ಲಿ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅಲ್ಲದೆ, ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿದೆ.

ಹುಬ್ಬಳ್ಳಿ-ಯಶವಂತಪುರ, ಯಶವಂತಪುರ-ವಿಜಯಪುರ, ಯಶವಂತಪುರ-ಬೆಳಗಾವಿ, ಬೆಳಗಾವಿ-ಯಶವಂತಪುರ, ಮೈಸೂರು-ಬೀದರ್, ಬೀದರ್-ಮೈಸೂರು, ಯಶವಂತಪುರ-ಬೀದರ್, ಬೀದರ್-ಯಶವಂತಪುರ, ಸಂಗೊಳ್ಳಿ ರಾಯಣ್ಣ ನಿಲ್ದಾಣ-ಮೈಸೂರು, ಮೈಸೂರು- ಸಂಗೊಳ್ಳಿ ರಾಯಣ್ಣ ನಿಲ್ದಾಣ, ಯಶವಂತಪುರ-ಮೈಸೂರು, ಮೈಸೂರು-ಯಶವಂತಪುರ, ಯಶವಂತಪುರ-ಶಿವಮೊಗ್ಗ, ಶಿವಮೊಗ್ಗ-ಸಂಗೊಳ್ಳಿ ರಾಯಣ್ಣ ನಿಲ್ದಾಣ, ಯಶವಂತಪುರ-ಕಾರವಾರ, ಕಾರವಾರ-ಯಶವಂತಪುರ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 18 ಹೆಚ್ಚುವರಿ ರೈಲುಗಳ ಸೇವೆ ನೀಡಲಾಗಿದೆ.

ರೈಲುಗಳ ಹೆಚ್ಚುವರಿ ಸೇವೆಗೆ ಸರಕಾರದ ಮುಖ್ಯ ಕಾರ್ಯದರ್ಶಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲು ಸೇವೆ ನೀಡಲಾಗಿದೆ.

ಆರನೆ ವೇತನ ಆಯೋಗದ ಜಾರಿಗೆ ಆಗ್ರಹಿಸಿ ಕಳೆದ ನಾಲ್ಕು ತಿಂಗಳಲ್ಲಿ ಎರಡನೆ ಬಾರಿಗೆ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದ ಸರಕಾರ ಖಾಸಗಿ ಬಸ್ ಮೊರೆ ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News