×
Ad

ಅಲ್ಲಾಹನ ದಯೆಯಿಂದ ಬಸವಕಲ್ಯಾಣದಲ್ಲಿ ನಮ್ಮ ಅಭ್ಯರ್ಥಿ ಗೆದ್ದರೆ 2023ರಲ್ಲಿ ನಮ್ಮದೇ ಸರಕಾರ: ಕುಮಾರಸ್ವಾಮಿ

Update: 2021-04-08 22:08 IST

ಬೀದರ್, ಎ.8: ಅಲ್ಲಾಹ್‍ನ ದಯೆಯಿಂದ ಬಸವಕಲ್ಯಾಣ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಜಯಗಳಿಸಿದರೆ 2023ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಬಸವಕಲ್ಯಾಣದ ಜಮಾಅತೆ ಇಸ್ಲಾಮೀ ಹಿಂದ್ ಮಸೀದಿಯಲ್ಲಿ, ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‍ನ ಸ್ನೇಹಿತರು ನಮ್ಮನ್ನ ಬಿಜೆಪಿಯ ‘ಬಿ’ ಟೀಮ್ ಅನ್ನೋ ಗೂಬೆ ಕೂಡಿಸಿ ನಮ್ಮ ಪಕ್ಷದ ಬಗ್ಗೆ ಕೆಟ್ಟ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾರ್ ಏನು ಅಂದ್ರು ನಾವು ನಮ್ಮ ಜಾತ್ಯತೀತ ಸಿದ್ಧಾಂತಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತೇವೆ ಎಂಬುದನ್ನು ನಾನು ಬಹಳ ಸ್ಪಷ್ಟವಾಗಿ ಹೇಳುತ್ತೇನೆ. ಖಾದ್ರಿ ಸಾಹೇಬರನ್ನು ನಿಲ್ಲಿಸಲು ತಿರ್ಮಾನಿಸಿದ್ದು, ದೇವರು ಕೊಟ್ಟ ಪ್ರೇರಣೆಯಾಗಿದೆ. ಮುಸ್ಲಿಮ್ ಸಮಾಜದ ಅಭ್ಯರ್ಥಿಯನ್ನು ನಿಲ್ಲಿಸಿದರೆ ಮುಸ್ಲಿಮರಿಗೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ ಎಂಬ ಕಾರಣಕ್ಕಾಗಿ ಮುಸ್ಲಿಮ್ ಸಮಾಜದ ಅಭ್ಯರ್ಥಿಯನ್ನು ಹಾಕಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

ಕಲಬುರಗಿಯ ಇನಾಮ್ದಾರ್ ಅವರನ್ನು ನಾನು ವಿಚಾರಿಸಿದಾಗ ಅವರು ಖಾದ್ರಿ ಸಾಹೇಬರ ಹೆಸರು ಹೇಳಿದ್ದರು. ಅದೇ ಕಾರಣಕ್ಕಾಗಿ ಖಾದ್ರಿ ಸಾಹೇಬರಲ್ಲಿ ಮನವಿ ಮಾಡಿದಾಗ ಅವರು ಸಮಯ ತಗೊಂಡು ಒಪ್ಪಿಕೊಂಡರು. ಈ ಚುನಾವಣೆಯಲ್ಲಿ ಅಲ್ಲಾಹನ ದಯೆಯಿಂದ ನಾನು ಪಾಸ್ ಆದರೆ 2023 ರಲ್ಲಿ ನಮ್ಮ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂದು ಅವರು ತಿಳಿಸಿದರು.

ಈ ಚುನಾವಣೆ ಖಾದ್ರಿಯವರ ಚುನಾವಣೆ ಮಾತ್ರ ಅಲ್ಲ. ಇದು ನನ್ನ ಮತ್ತು ನಮ್ಮ ಪಕ್ಷದ ಚುನಾವಣೆಯಾಗಿದೆ. ನಮ್ಮ ಪಕ್ಷಕ್ಕೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಮುಸ್ಲಿಮ್ ಸಮಾಜದ ಮತಗಳನ್ನು ಒಡೆದು ಯಾವುದೋ ಒಂದು ಪಕ್ಷವನ್ನು ಗೆಲ್ಲಿಸಲು ನಾನು ಇಲ್ಲಿಗೆ ಬಂದಿಲ್ಲ. ಗೆಲ್ಲುವ ಸಲುವಾಗಿ ಬಂದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್, ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News