ಯಡಿಯೂರಪ್ಪ ಮಾತ್ರವಲ್ಲ, ಸಾರಿಗೆ ನೌಕರರೂ ಹೋಳಿಗೆ ತಿನ್ನಲಿ: ಕೋಡಿಹಳ್ಳಿ ಚಂದ್ರಶೇಖರ್

Update: 2021-04-08 16:39 GMT

ಬೆಂಗಳೂರು, ಎ.8: ಈ ಬಾರಿಗೆ ಯುಗಾದಿ ಹಬ್ಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರವಲ್ಲ, ಸಾರಿಗೆ ನೌಕರರೂ ಹೋಳಿಗೆ ತಿನ್ನಬೇಕು. ಹಾಗಾಗಿ, ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಬೇಡಿಕೆಗಳನ್ನು ಈಡೇರಿಸಲಿ ಎಂದು ಕೆಎಸ್ಸಾರ್ಟಿಸಿ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಗುರುವಾರ ನಗರದ ತಮ್ಮ ಕಚೇರಿಯಲ್ಲಿ ಮೂರನೇ ದಿನವೂ ಹೋರಾಟ ಮುಂದುವರಿಸುವ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಮಾರ್ಚ್ ತಿಂಗಳ ನೌಕರರ ವೇತನ ತಡೆ ಹಿಡಿಯುವ ಕೆಲಸ ಮಾಡಬಾರದು. ಅಲ್ಲದೆ, ಯುಗಾದಿ ಹಬ್ಬ ಇದ್ದು, ನೌಕರರ ಬೇಡಿಕೆಗಳನ್ನು ಈಡೇರಿಸಿ ಸಂತೋಷ ನೀಡಲಿ ಎಂದರು.

ನಾವು ಯಾವುದೇ ಹೊಸ ಬೇಡಿಕೆಗಳನ್ನು ರಾಜ್ಯ ಸರಕಾರದ ಮುಂದಿಟ್ಟಿಲ್ಲ. ಡಿಸೆಂಬರ್ ತಿಂಗಳಿನಲ್ಲಿ ನಡೆದ ಹೋರಾಟದಲ್ಲಿ ಸರಕಾರ ನೀಡಿದ ಭರವಸೆ ಈಡೇರಿಸಬೇಕೆಂದು ಕೇಳುತ್ತಿದ್ದೇವೆ ಎಂದ ಅವರು, ಮುಷ್ಕರ ಅಂತ್ಯಗೊಳಿಸುವ ಮನಸ್ಸು ಸರಕಾರಕ್ಕೆ ಇರಬೇಕು ಎಂದು ನುಡಿದರು.

ನಾಳೆಯೂ ಪ್ರತಿಭಟನೆ: ಸಾರಿಗೆ ನೌಕರರ ಬೇಡಿಕೆತನ್ನ ಸರ್ಕಾರ ಈಡೇರಿಸದ ಹಿನ್ನೆಲೆಯಲ್ಲಿ ನಾಳೆಯೂ(ಎ.9) ಪ್ರತಿಭಟನೆ ಮುಂದುವರಿಯಲಿದೆ ಎಂದ ಅವರು, ಸರಕಾರಿ ನೌಕಕರಿಗೆ ಅತ್ಯಂತ ಕಡಿಮೆ ಸಂಬಳ ನೀಡಲಾಗುತ್ತಿದೆ. ಇಷ್ಟೊಂದು ಕಡಿಮೆ ವೇತನ ಯಾವ ನಿಗಮದ ನೌಕರರಿಗೂ ನೀಡುವುದಿಲ್ಲ. ಈ ತಾರತಮ್ಯ ನೀತಿ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಖಾಸಗೀಕರಣ: ರಾಜ್ಯ ಸರಕಾರ ಸಾರಿಗೆ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟರೆ ಜನಾಕ್ರೋಶಕ್ಕೆ ಗುರಿಯಾಗುತ್ತಾರೆ. ಅಲ್ಲದೆ, ಈಗಲೇ ಕೃಷಿ ವಲಯವನ್ನು ಸಂಪೂರ್ಣ ಖಾಸಗಿಕರಣಗೊಳಿಸುವ ಹುನ್ನಾರ ನಡೆದಿದೆ. ಈಗ ಸಾರಿಗೆಯೂ ಮಾಡಿದರೆ, ಇಂತಹ ಈಸ್ಟ್ ಇಂಡಿಯಾ ಕಂಪೆನಿಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.

ನೀವು ಕೇವಲ ಮನೆಯಲ್ಲಿ ಕುಳಿತು ಶೇ.8ರಷ್ಟು ಸಂಬಳ ಜಾಸ್ತಿ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಅಲ್ಲದೆ, ನಮ್ಮ ಬೇಡಿಕೆ ವೇತನ ಪರಿಷ್ಕರಣೆ ಅಲ್ಲ. ಬದಲಾಗಿ, 6ನೇ ವೇತನ ಆಯೋಗ ಶಿಫಾರಸ್ಸು. ಹಾಗಾಗಿ, ಕೊಟ್ಟ ಮಾತಿನಂತೆ ಸರಕಾರ ನಡೆದುಕೊಳ್ಳಬೇಕು ಎಂದು ಕೋಡಿಹಳ್ಳಿ ತಿಳಿಸಿದರು.

ಮಾತುಕತೆಗೆ ಕರೆದಿಲ್ಲ

ರಾಜ್ಯ ಸರಕಾರ ಇದುವರೆಗೂ ನಮಗೆ ಮಾತುಕತೆಗೆ ಕರೆದಿಲ್ಲ. ಈ ಸಂಬಂಧ ಲಿಖಿತ ಅಥವಾ ಅಧಿಕೃತ ಪತ್ರವೂ ಬಂದಿಲ್ಲ. ಹೀಗಿರುವಾಗ ನಾವು ಎಲ್ಲಿಗೆ ಮಾತುಕತೆಗೆ ಹೋಗಬೇಕು?

-ಕೋಡಿಹಳ್ಳಿ ಚಂದ್ರಶೇಖರ್, ಗೌರವಾಧ್ಯಕ್ಷ, ಕೆಎಸ್ಸಾರ್ಟಿಸಿ ನೌಕರರ ಕೂಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News