ಅತ್ಯಾಚಾರ ಆರೋಪಿಯನ್ನು ರಕ್ಷಿಸಲು ತೆಗೆದುಕೊಂಡ ಕಾಳಜಿ ನೌಕರರಿಗೂ ತೋರಲಿ: ಕಾಂಗ್ರೆಸ್
ಬೆಂಗಳೂರು, ಎ.8: ಸಾರಿಗೆ ನೌಕರರನ್ನು ಶತ್ರುಗಳಂತೆ ನೋಡುವುದನ್ನು ರಾಜ್ಯ ಬಿಜೆಪಿ ಸರಕಾರ ಬಿಡಬೇಕು. ಖಾಸಗಿ ಬಸ್‍ಗಳ ಮೂಲಕ ನೌಕರರನ್ನು ಸೋಲಿಸುತ್ತೇವೆ ಎಂದು ಹೊರಟರೆ ಅದು ಮೂರ್ಖತನ ಎಂದು ಕೆಪಿಸಿಸಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕೆಪಿಸಿಸಿ, ನಿಗಮಗಳು ನಷ್ಟ ಅನುಭವಿಸುತ್ತವೆ, ಪ್ರಯಾಣಿಕರಿಗೆ ತೊಂದರೆಯೇ ಹೊರತು ಬೇರಾವ ಸಾಧನೆಯೂ ಸಾಧ್ಯವಿಲ್ಲ. ಅತ್ಯಾಚಾರ ಆರೋಪಿಯನ್ನು ರಕ್ಷಿಸಲು ತೆಗೆದುಕೊಂಡ ಕಾಳಜಿ ನೌಕರರಿಗೂ ತೋರಲಿ ಎಂದು ತಿರುಗೇಟು ನೀಡಿದೆ.
ಕೊರೋನ ಟೆಸ್ಟಿಂಗ್‍ನಲ್ಲಿ, ಸೋಂಕು ನಿಯಂತ್ರಿಸುವುದರಲ್ಲಿ ಮಾತ್ರ ಸೋತಿರುವುದಲ್ಲ ಲಸಿಕೆ ನೀಡುವುದರಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿವೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರೇ, ಇದೇ ಮಂದಗತಿಯಲ್ಲಿ ಲಸಿಕೆ ಕಾರ್ಯಕ್ರಮ ನಡೆದರೆ ಇನ್ನೆಷ್ಟು ದಶಕಗಳು ಹಿಡಿಯಹುದು? ಮತ್ತೊಮ್ಮೆ ಸಾಮಾಜಿಕ, ಆರ್ಥಿಕ ಪಲ್ಲಟಗಳಾಗುವ ಮುಂಚೆ ಸೋಂಕು ನಿಯಂತ್ರಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.