ಯಡಿಯೂರಪ್ಪ ಜೊತೆ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ ಸವಾಲು

Update: 2021-04-08 17:13 GMT

ಬೀದರ್, ಎ. 8: `ಕಮಿಷನ್ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರೊಂದಿಗೆ ಜಗಳವಾಡಿಕೊಂಡ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

ಗುರುವಾರ ಜಿಲ್ಲೆಯ ಬಸವಕಲ್ಯಾಣದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಆಡಳಿತದಲ್ಲಿ ಕಮಿಷನ್ ದಂಧೆ ಭರ್ಜರಿಯಾಗಿ ನಡೆಯುತ್ತಿದೆ. ಸಚಿವ ಈಶ್ವರಪ್ಪ ಅವರು, ಸಿಎಂ ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಲು ಇದೇ ಕಾರಣ ಎಂದು ಹೇಳಿದರು.

ಈಶ್ವರಪ್ಪ ಅವರ ಗಮನಕ್ಕೆ ತಾರದೆ ಅವರ ಇಲಾಖೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕಮಿಷನ್ ಹೊಡೆಯುವ ವಿಷಯದಲ್ಲಿ ವಿಜಯೇಂದ್ರ ಮತ್ತು ಈಶ್ವರಪ್ಪ ನಡುವೆ ಜಗಳವಾಗಿದೆ. ಕಮಿಷನ್ ದಂಧೆ 30-35 ಪರ್ಸೆಂಟ್ ವರೆಗೂ ಹೋಗಿದೆ. `ನಾ ಖಾವುಂಗ ನಾ ಖಾನೇದೂಂಗ' ಎನ್ನುವ ಪ್ರಧಾನಿ ಮೋದಿ ಈ ಬಗ್ಗೆ ಮೌನ ವಹಿಸಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ತರಕಾರಿ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗಿದೆ. ಬೆಲೆ ಏರಿಕೆಯೇ ಅಚ್ಛೇ ದಿನ ಆಗಿದೆ. ಬೆಲೆ ನಿಯಂತ್ರಣದಲ್ಲಿ ಪ್ರಧಾನಿ ಮೋದಿ ಸೋತಿದ್ದಾರೆ. ರೈತರಿಗೆ ಸ್ಪಂದಿಸುವಲ್ಲಿಯೂ ಅವರು ವಿಫಲರಾಗಿದ್ದಾರೆ. ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಮೋದಿಯವರ ಸುಳ್ಳು ಕೇಳಿ ಕೇಳಿ ಜನರಿಗೆ ಬೇಸರ ಬಂದಿದೆ. ಯಡಿಯೂರಪ್ಪ ಸಿಎಂ ಆಗಿ ಎರಡು ವರ್ಷ ಕಳೆದಿದೆ. ಅವರ ಆಡಳಿತ ನೋಡಿದಾಗ ರಾಜ್ಯದ ಆರ್ಥಿಕ ಪರಿಸ್ಥಿತಿ ಹಿಂದೆಂದೂ ಈ ಮಟ್ಟದಲ್ಲಿ ದಿವಾಳಿ ಆಗಿರಲಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಅವರು ದೂರಿದರು.

ಚರ್ಚೆಗೆ ಸಿದ್ಧ: ಸಾಲದ ಸುಳಿಗೆ ಸಿಲುಕಿ ರಾಜ್ಯ ನರಳುತ್ತಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಿದ ಸರಕಾರ, ಅಭಿವೃದ್ಧಿ ಕಾಮಗಾರಿಗಳಿಗೆ ಈ ವರೆಗೆ ನಯಾಪೈಸೆ ಖರ್ಚು ಮಾಡಿಲ್ಲ. ಈ ಕುರಿತು ಯಡಿಯೂರಪ್ಪ ಅವರ ಜೊತೆ ಚರ್ಚೆಗೆ ಸಿದ್ಧ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಜಿಎಸ್‍ಟಿ ವಿಚಾರದಲ್ಲಿ ರಾಜ್ಯಕ್ಕೆ ಸಿಗಬೇಕಾದ ಹಣಕಾಸು ನೆರವು ಕೇಂದ್ರದಿಂದ ಸಿಗುತ್ತಿಲ್ಲ. ಯಡಿಯೂರಪ್ಪ ಅವರಿಗೆ ಭಯವಾದರೆ ಮೋದಿಯವರ ಬಳಿ ನಾವು ಮಾತಾಡ್ತೇವೆ. ರಾಜ್ಯದ ಜನ ಮೋದಿ, ಯಡಿಯೂರಪ್ಪ ಬಗ್ಗೆ ಭ್ರಮ ನಿರಸನಗೊಂಡಿದ್ದಾರೆ. ಹೀಗಾಗಿ ಬಸವಕಲ್ಯಾಣದಲ್ಲಿ ನಮ್ಮ ಅಭ್ಯರ್ಥಿ ಮಾಲಾ ನಾರಾಯಣರಾವ್ ಗೆಲುವು ಸಾಧಿಸಲಿದ್ದಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಮೊದಲು ಯತ್ನಾಳ್‍ಗೆ ಬುದ್ಧಿ ಹೇಳಿ: ಯಡಿಯೂರಪ್ಪ ಅವರನ್ನು ಟೀಕಿಸಿದ್ದಕ್ಕಾಗಿ ಕೆಲ ಸಚಿವರು ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರು ದಿನಬೆಳಗಾದರೆ ಯಡಿಯೂರಪ್ಪ ವಿರುದ್ಧ ಟೀಕೆ ಮಾಡುತ್ತಾರೆ. ಸಚಿವರು ಮೊದಲು ಯತ್ನಾಳ್ ಅವರಿಗೆ ಬುದ್ಧಿ ಹೇಳುವ ಕೆಲಸ ಮಾಡಲಿ. ಸಿಎಂ ವಿರುದ್ಧ ಪದೇ ಪದೇ ಮಾತನಾಡುವ ಯತ್ನಾಳ್ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷರು ಈವರೆಗೆ ಕ್ರಮ ಕೈಗೊಂಡಿಲ್ಲ. ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅಸಮರ್ಥ ನಾಯಕ ಎಂದು ಸಿದ್ದರಾಮಯ್ಯ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News