ಮುಷ್ಕರ ನಿರತರು ನನ್ನ ಭರವಸೆಯನ್ನು ತಪ್ಪಾಗಿ ವ್ಯಾಖ್ಯಾನ ಮಾಡುತ್ತಿದ್ದಾರೆ: ಡಿಸಿಎಂ ಲಕ್ಷ್ಮಣ ಸವದಿ

Update: 2021-04-08 17:51 GMT

ಬೆಂಗಳೂರು, ಎ.8: ‘ವೇತನ ವಿಷಯಕ್ಕೆ ಸಂಬಂಧಿಸಿದಂತೆ ತೀರ್ಮಾನಿಸುವ ಸಂದರ್ಭದಲ್ಲಿ ಸಾರಿಗೆ ನೌಕರರು ಹಲವಾರು ಬೇಡಿಕೆಗಳನ್ನು ಇಟ್ಟಿದ್ದು, ಅದರಲ್ಲಿ 6ನೆ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಗಣಿಸುವಂತೆ ಕೋರಿದ್ದರು. ಈ ಬಗ್ಗೆ ಸರಕಾರವು ಆರ್ಥಿಕ ಅಂಶವನ್ನು ಪರಿಗಣಿಸಿ ತೀರ್ಮಾನಿಸಲಾಗುವುದು’ ಎಂದು ಸರಕಾರದ ಪರವಾಗಿ ನಾನು ನೀಡಿದ್ದ ಲಿಖಿತ ಆಶ್ವಾಸನೆಯನ್ನು ಮುಷ್ಕರನಿರತರು ತಪ್ಪಾಗಿ ವ್ಯಾಖ್ಯಾನ ಮಾಡಿ ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗುವಂತೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯದ ಹದಗೆಟ್ಟ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ 6ನೆ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವುದು ಅಸಾಧ್ಯವಾದರೂ ನೌಕರರ ವೇತನ ಹೆಚ್ಚಳಕ್ಕೆ ಸರಕಾರ ಮುಂದಾಗಿದ್ದು, ಈ ಕುರಿತು ಚುನಾವಣಾ ಆಯೋಗದ ಅನುಮತಿಯನ್ನು ಕೋರಲಾಗಿದೆ. ಚುನಾವಣಾ ಆಯೋಗದ ಅನುಮತಿ ದೊರಕಿದ ನಂತರ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಈ ಅಂಶವನ್ನು ಮುಷ್ಕರನಿರತರು ಅರ್ಥ ಮಾಡಿಕೊಳ್ಳದಿರುವುದು ವಿಷಾದನೀಯ. ಈ ಮುಷ್ಕರಕ್ಕೆ ಕರೆಕೊಟ್ಟ ಹಾಗೂ ಇತರೆ ಸಾರಿಗೆ ಒಕ್ಕೂಟಗಳ ಮುಖಂಡರ ಜೊತೆ ನಮ್ಮ ಅಧಿಕಾರಿಗಳು ಮತ್ತು ನಾನು ಹಲವಾರು ಬಾರಿ ಸಭೆ, ಚರ್ಚೆ ನಡೆಸಿದ್ದೇವೆ. ಆದರೆ, ಮುಷ್ಕರ ನಿರತರು ಈಗ ತಮ್ಮೊಂದಿಗೆ ಸರಕಾರವು ಚರ್ಚೆ ನಡೆಸಿಯೇ ಇಲ್ಲ ಎಂದು ಆರೋಪಿಸುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ನೆರೆ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯ ಸರಕಾರಗಳಿಗೆ ಪತ್ರ ಬರೆದು ಹೆಚ್ಚುವರಿ ಬಸ್ಸುಗಳನ್ನು ಕರ್ನಾಟಕಕ್ಕೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಅದಕ್ಕೆ ಎಲ್ಲ ಸರಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ. ನೆರೆ ರಾಜ್ಯದ ಖಾಸಗಿ ಪ್ರವರ್ತಕರು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಆಚರಣೆ ಮಾಡಲು ಸಿದ್ಧವಿದ್ದಲ್ಲಿ ಅಂತಹ ಖಾಸಗಿ ವಾಹನಗಳ ಸೇವೆಯನ್ನು ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಬೆಂಗಳೂರಿನಿಂದ ಬೆಳಗಾವಿ, ಕಲಬುರಗಿ, ಬೀದರ್, ಕಾರವಾರ, ವಿಜಯಪುರ, ಶಿವಮೊಗ್ಗ ಹಾಗೂ ಮೈಸೂರುಗಳಿಗೆ ವಿಶೇಷ ಹೆಚ್ಚುವರಿ ರೈಲುಗಳನ್ನು ಸಂಚರಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 18 ಹೆಚ್ಚುವರಿ ರೈಲುಗಳನ್ನು ರಾಜ್ಯದ ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಹೆಚ್ಚುವರಿ ಮೆಟ್ರೊ ರೈಲುಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಖಾಸಗಿ ವಾಹನಗಳನ್ನು ನಿಗಮದ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲು ಮತ್ತು ಬಸ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲು ಅನುಮತಿ ನೀಡಲಾಗಿದೆ. ಮಾ.29ರಂದು ಅನುಪಯುಕ್ತದಲ್ಲಿರುವ ವಾಹನಗಳಿಗೆ ಎಪ್ರಿಲ್ ತಿಂಗಳ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ, ವಾಹನ ಮಾಲಕರು ಸರೆಂಡರ್ ನಲ್ಲಿರುವ ವಾಹನಗಳನ್ನು ಆಚರಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಈ ಮುಷ್ಕರದ ಅವಧಿಯಲ್ಲಿ ಖಾಸಗಿ ಪ್ರಯಾಣಿಕರ ವಾಹನಗಳಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಸುಮಾರು 100 ತಾತ್ಕಾಲಿಕ ರಹದಾರಿಗಳನ್ನು ನೀಡಲಾಗಿದೆ. ಖಾಸಗಿ ಪ್ರಯಾಣಿಕರ ವಾಹನಗಳಿಗೆ ರಾಜ್ಯಾದ್ಯಂತ ಸಂಚರಿಸಲು ಅಗತ್ಯವಿರುವ ರಹದಾರಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಖಾಸಗಿ ವಾಹನಗಳಿಗೆ ಪ್ರತ್ಯೇಕ ದರ ಪಟ್ಟಿ ನಿಗದಿಪಡಿಸಲಾಗಿದೆ. ಸಾರಿಗೆ ಇಲಾಖೆಯ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಿರುವುದಕ್ಕೆ ನನಗೆ ತೀವ್ರ ವಿಷಾದವಾಗಿದೆ. ನೌಕರರು ಮುಷ್ಕರವನ್ನು ಕೈ ಬಿಟ್ಟು ಸುಗಮ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕು ಎಂದು ಲಕ್ಷ್ಮಣಸವದಿ ಮನವಿ ಮಾಡಿದ್ದಾರೆ.

ಇಂತಹ ಕಠಿಣ ಸಮಯದಲ್ಲಿ ಖಾಸಗಿ ವಾಹನ ಮಾಲಕರು ಸಹಕರಿಸಿರುವುದಕ್ಕೆ ಧನ್ಯವಾದ ಹೇಳುತ್ತಾ, ಸಾರ್ವಜನಿಕರು ಕೂಡ ಸಹಕಾರ ನೀಡಬೇಕು ಎಂದು ಲಕ್ಷ್ಮಣ ಸವದಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News