ಸಿದ್ದರಾಮಯ್ಯರ ಕೆಟ್ಟ ಆಡಳಿತ ರಾಜ್ಯಕ್ಕೆ ಎಂದಿಗೂ ಬಾರದಿರಲಿ: ಸಿ.ಟಿ.ರವಿ

Update: 2021-04-08 18:21 GMT

ಚಿಕ್ಕಮಗಳೂರು, ಎ.8: ಕೆಎಸ್ಸಾರ್ಟಿಸಿ ಸಿಬ್ಬಂದಿ ಮೇ 2ರವರೆಗೂ ಸರಕಾರಕ್ಕೆ ಕಾಲಾವಕಾಶ ನೀಡಬೇಕು. ಬೇಡಿಕೆಗಳನ್ನು ಸರಕಾರ ಈಡೇರಿಸದಿದ್ದರೆ ನಾವೂ ಕೂಡ ಕೆಎಸ್ಸಾರ್ಟಿಸಿ ನೌಕರರ ಹೋರಾಟಕ್ಕೆ ಕೈಜೋಡಿಸುತ್ತೇವೆ ಎಂದು ಮಾಜಿ ಸಚಿವ ಮತ್ತು ಹಾಲಿ ಶಾಸಕ ಸಿ.ಟಿ.ರವಿ ಹೇಳಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೌಕರರು ಯಾವುದೇ ರಾಜಕೀಯ ಪಕ್ಷದ ದಾಳವಾಗಬಾರದು. ಕೋವಿಡ್‍ನಿಂದ ನಿಗಮ ನಷ್ಟ ಅನುಭವಿಸುತ್ತಿದ್ದು, ನೌಕರರು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಹಠಮಾರಿ ಧೋರಣೆ ತೋರಿದರೆ ಅದರ ಪರಿಣಾಮ ನೌಕರರ ಮೇಲೆ ಆಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ರಾಜಕೀಯ ದಾಳವಾಗಬೇಡಿ ಎಂದು ಮನವಿ ಮಾಡಿದರು. 

ರಾಜ್ಯ ಸರಕಾರ ದಿವಾಳಿಯಾಗಿದೆ. ಮೋದಿ ಸುಳ್ಳು ಭರವಸೆಯಿಂದ ಜನರು ಬೇಸತ್ತು ಹೋಗಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 370 ಆರ್ಟಿಕಲ್ ರದ್ದು ಮಾಡಿದ್ದು ಸುಳ್ಳೇ ? ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿರುವುದು ಸುಳ್ಳೇ ? ಆಯುಷ್ಮಾನ್ ಭಾರತ ತಂದಿದ್ದು ಸುಳ್ಳೇ ? ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗೆ ಹಣ ಹಾಕಿದ್ದು ಸುಳ್ಳೇ ಎಂದು ಪ್ರಶ್ನಿಸಿದರು. 

ಸಿದ್ದರಾಮಯ್ಯ ಅವರಿಗೆ ಆಡಳಿತ ಎಂದರೆ ಜಾತಿ ಒಡೆಯುವುದು, ಕೊಲೆ ಸುಲಿಗೆ ಆಗುತ್ತಿದ್ದರೆ ಅದು ಅವರಿಗೆ ಒಳ್ಳೆಯ ಆಡಳಿತ ಎನಿಸುತ್ತದೆ. ಸಿದ್ದರಾಮಯ್ಯ ಅವರ ಆಡಳಿತ ರಾಜ್ಯದಲ್ಲಿ ಇನ್ನು ಯಾವತ್ತೂ ಬರಬಾರದು. ಈ ಕಾರಣದಿಂದಲೇ ಜನರು ಅವರನ್ನು ಸೋಲಿಸಿದ್ದು, ಉತ್ತಮ ಆಡಳಿತ ನೀಡುವ ಬಗ್ಗೆ ಅವರು ಸಲಹೆ ನೀಡಲಿ. ಅದನ್ನು ಬಿಟ್ಟು ಅವರ ಅಧಿಯ ಕೆಟ್ಟ ಆಡಳಿತವನ್ನು ಒಳ್ಳೆಯ ಆಡಳಿತ ಎಂದುಕೊಂಡರೆ ನಾವೇನು ಮಾಡಲು ಸಾಧ್ಯ. ಅಂತಹ ಕೆಟ್ಟ ಆಡಳಿತ ರಾಜ್ಯಕ್ಕೆ ಬೇಡ ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News