6ನೇ ವೇತನ ಆಯೋಗದ ಶಿಫಾರಸು ಜಾರಿ ಸಾಧ್ಯವಿಲ್ಲ, ಹಠ ಬಿಟ್ಟು ಕರ್ತವ್ಯಕ್ಕೆ ಬನ್ನಿ: ಸಿಎಂ ಯಡಿಯೂರಪ್ಪ

Update: 2021-04-09 11:33 GMT

ಬೆಂಗಳೂರು, ಎ. 9: `ಸವಾಲಿನ ಸಂದರ್ಭಗಳಲ್ಲಿಯೂ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಸರಕಾರ ಈಗಾಗಲೇ ಈಡೇರಿಸಿದ್ದು, ಆರನೆ ವೇತನ ಆಯೋಗದ ಶಿಫಾರಸ್ಸಿನಂತೆ ಸಾರಿಗೆ ನೌಕರರಿಗೆ ವೇತನ-ಭತ್ತೆ ನೀಡಲು ಸಾಧ್ಯವಿರುವುದಿಲ್ಲ. ಆದುದರಿಂದ ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಮನವಿ ಮಾಡಿದ್ದಾರೆ.

ಶುಕ್ರವಾರ ನಗರದಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಪ್ರಸಕ್ತ ಸಂದರ್ಭಗಳಲ್ಲಿ ಮತ್ತಷ್ಟು ಹೆಚ್ಚು ಅನುದಾನವನ್ನು ಯೋಜನೇತರ ವೆಚ್ಚಗಳಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಲಾಕ್‍ಡೌನ್ ಸಂದರ್ಭದಲ್ಲಿಯೂ ಸಾರಿಗೆ ನೌಕರರ ಹಿತರಕ್ಷಣೆ ದೃಷ್ಟಿಯಿಂದ ಅವರಿಗೆ ವೇತನ ನೀಡಲು, ಸರಕಾರ 2,300 ಕೋಟಿ ರೂ.ಗಳ ಅನುದಾನ ನೀಡಿದೆ' ಎಂದು ಮಾಹಿತಿ ನೀಡಿದರು.

`ರಾಜ್ಯದ ಒಟ್ಟು ಆದಾಯದ ಶೇ.85ರಷ್ಟು, ಸರಕಾರಿ ನೌಕರರ ವೇತನ, ಭತ್ತೆ, ಪಿಂಚಣಿ ಮತ್ತಿತರ ಯೋಜನೇತರ ವೆಚ್ಚಗಳಿಗೆ ವ್ಯಯವಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅಲ್ಪ ಆದಾಯ ಲಭ್ಯವಿರುತ್ತದೆ. ಬಜೆಟ್ ಅಧಿವೇಶನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದಂತೆ, ಯೋಜನೇತರ ವೆಚ್ಚ ಈಗಾಗಲೇ ಅಧಿಕವಾಗಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ನೌಕರರ ಆರನೇ ವೇತನ ಆಯೋಗದ ಶಿಫಾರಸ್ಸಿನ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಹಠಬಿಟ್ಟು ಕರ್ತವ್ಯಕ್ಕೆ ಬನ್ನಿ: ಸಾರಿಗೆ ನೌಕರರಲ್ಲಿ ನಾನು ಕೈಜೋಡಿಸಿ ಮನವಿ ಮಾಡುತ್ತೇನೆ. ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆ ನೀಡುವುದು ಸರಿಯಲ್ಲ. ಹೀಗಾಗಿ ಕೂಡಲೇ ಹಠಬಿಟ್ಟು ಕರ್ತವ್ಯಕ್ಕೆ ಬನ್ನಿ ಎಂದು ಮನವಿ ಮಾಡಿದ ಯಡಿಯೂರಪ್ಪ, ಸಾರಿಗೆ ಸಂಸ್ಥೆಗಳ ನೌಕರರೊಂದಿಗೆ ಮಾತುಕತೆ ಪ್ರಶ್ನೆಯೇ ಇಲ್ಲ. ಆರನೇ ವೇತನ ಆಯೋಗದ ಶಿಫಾರಸ್ಸು ಅನುಷ್ಠಾನ ಕಷ್ಟ ಸಾಧ್ಯವೆಂದರೆ ಮಾತುಕತೆ ಪ್ರಶ್ನೆ ಉಧ್ಬವಿಸದು ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

ಯಾರದ್ದೋ ಮಾತಿಕೆ ಕಟ್ಟುಬಿದ್ದು ಮುಷ್ಕರದ ನೆಪದಲ್ಲಿ ಹಠ ಮಾಡುವುದು ಒಳ್ಳೆಯದಲ್ಲ. ಕೂಡಲೇ ಬಸ್ ಸಂಚಾರ ಆರಂಭಿಸಿ. ಸಾರ್ವಜನಿಕ ಪ್ರಯಾಣಿಕರನ್ನು ಸಂಕಷ್ಟಕ್ಕೆ ದೂಡುವುದು ಸರಿಯಲ್ಲ. ಹೀಗಾಗಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ಸಾರಿಗೆ ನೌಕರರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ವಿನಂತಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News