ಸಾರಿಗೆ ನೌಕರರ ಮುಷ್ಕರದ ಹಿಂದೆ ಕುತಂತ್ರಿಗಳ ಷಡ್ಯಂತ್ರ: ಸಚಿವ ಕೆ.ಎಸ್.ಈಶ್ವರಪ್ಪ

Update: 2021-04-09 12:00 GMT

ಹುಬ್ಬಳ್ಳಿ, ಎ. 9: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ, ಕಾರ್ಮಿಕರ ಪ್ರತಿಭಟನೆಯಲ್ಲ. ಬದಲಿಗೆ ಕುತಂತ್ರ ವ್ಯಕ್ತಿಗಳ ಷಡ್ಯಂತ್ರ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಆರೋಪಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಸ್ತೆ ಸಾರಿಗೆ ಸಂಸ್ಥೆ ಅದೊಂದು ನಿಗಮ. ರಾಜ್ಯದಲ್ಲಿ ಈ ರೀತಿಯ 117 ನಿಗಮಗಳಿವೆ. ಇವರ ಬೇಡಿಕೆ ಈಡೇರಿಸಿದರೆ ಎಲ್ಲ ನಿಗಮಗಳ ನೌಕರರನ್ನು ಇದೇ ಬೇಡಿಕೆ ಮುಂದಿಟ್ಟರೆ ಬಜೆಟ್‍ನ ಎಲ್ಲ ಹಣವನ್ನು ಇವರಿಗೆ ನೀಡಬೇಕಾಗುತ್ತದೆ. ಹೀಗಾಗಿ ಸಾರಿಗೆ ನೌಕರರಿಗೆ ಆರನೆ ವೇತನ ಆಯೋಗದ ಶಿಫಾರಸ್ಸು ಅನುಷ್ಠಾನ ಕಷ್ಟ ಸಾಧ್ಯ ಎಂದು ಹೇಳಿದರು.

ಸಾರಿಗೆ ಕಾರ್ಮಿಕ ಪ್ರತಿಭಟನೆ ಮಾಡುತ್ತಿಲ್ಲ. ಸಾರಿಗೆ ಮುಷ್ಕರದ ಹಿಂದೆ ಕೆಲ ಕುತಂತ್ರ ವ್ಯಕ್ತಿಗಳ ಷಡ್ಯಂತ್ರವಿದೆ. ತಾವು ಹಿಂದೆ ಇದ್ದುಕೊಂಡು ಸಾರಿಗೆ ನೌಕರರನ್ನು ಮುಂದೆ ಬಿಟ್ಟಿದ್ದಾರೆಂದ ಅವರು, ಕೊರೋನ ಸಂದರ್ಭದಲ್ಲಿ ಮುಷ್ಕರ ಕೈಬಿಡಬೇಕು. ನಂತರದಲ್ಲಿ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ನಿಮ್ಮ ಬಗ್ಗೆ ಸಹಾನುಭೂತಿ ಇದೆ. ಹೋರಾಟವನ್ನು ಕೈ ಬಿಟ್ಟು ಕರ್ತವ್ಯಕ್ಕೆ ಬನ್ನಿ ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಬಂಧಪಟ್ಟ ಸಚಿವರು ಸಮಸ್ಯೆ ಬಗೆಹರಿಸುತ್ತಾರೆ. ಈಗಾಗಲೇ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗಿದೆ. ಸಾರ್ವಜನಿಕ ಪ್ರಯಾಣಿಕ ಹಿತದೃಷ್ಟಿಯಿಂದ ಸಾರಿಗೆ ನೌಕರರು ಮುಷ್ಕರವನ್ನು ಕೈಬಿಟ್ಟು ಕೆಲಸ ಆರಂಭಿಸಬೇಕು ಎಂದು ಈಶ್ವರಪ್ಪ ಮನವಿ ಮಾಡಿದರು. ಬೆಳಗಾವಿ ಲೋಕಸಭೆ ಸೇರಿದಂತೆ ಮೂರು ಕ್ಷೇತ್ರಗಳ ಉಪ ಚುನಾವಣೆ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News