ಮಾಡುವುದನ್ನೆಲ್ಲಾ ಮಾಡಿ ಈಗೇಕೆ ಸರ್ವಪಕ್ಷ ಸಭೆ: ಸರಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ

Update: 2021-04-09 12:02 GMT

ಬೆಳಗಾವಿ, ಎ. 9: `ಕೊರೋನ ಸಂದರ್ಭದಲ್ಲಿ ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಮಾಡುವುದನ್ನೆಲ್ಲಾ ಮಾಡಿ ಇದೀಗ ರಾಜ್ಯ ಬಿಜೆಪಿ ಸರಕಾರ ಏಕೆ ಸರ್ವಪಕ್ಷ ಸಭೆ ಕರೆಯುತ್ತದೆ ಎಂಬುದು ಅರ್ಥವಾಗುತ್ತಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೋನ ಸೋಂಕು ನಿಯಂತ್ರಣಕ್ಕೆ ಮೊದಲಿಗೆ ದೀಪ ಹಚ್ಚಿ, ಜಾಗಟೆ ಬಾರಿಸಿ ಎಂದರು. ನಾವು ಅದನ್ನು ಮಾಡಿದೆವು. ಕೇಂದ್ರ ಸರಕಾರ 20 ಲಕ್ಷ ಕೋಟಿ ರೂ.ಪ್ಯಾಕೇಜ್ ಘೋಷಣೆ ಮಾಡಿತ್ತು. ಅದನ್ನು ಯಾರಿಗೆ ಕೊಟ್ಟಿದ್ದಾರೆ. ಮೊದಲು ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.

ಇವರು ಮಾಡಬಾರದನ್ನು ಮಾಡಿ ದೇಶವನ್ನು, ರಾಜ್ಯವನ್ನು ಲೂಟಿ ಮಾಡಿದ್ದಾರೆ. 16,000 ಕೋಟಿ ರೂ.ಭ್ರಷ್ಟಾಚಾರ ನಡೆದಿದೆ. ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಪ್ರಮಾಣದ ಭ್ರಷ್ಟಾಚಾರ ಇದು. ಕ್ಷೌರಿಕರು, ಮಡಿವಾಳ, ಚಾಲನಾ ವೃತ್ತಿ ಮಾಡುವವರಿಗೆ ಐದು ಸಾವಿರ ರೂ. ನೀಡುವ ಭರವಸೆ ನೀಡಿ ಒಬ್ಬರಿಗೂ ನಯಾಪೈಸೆ ಹಣ ನೀಡಿಲ್ಲ. ಈ ಬಗ್ಗೆ ಯಾರು ಬೇಕಾದರೂ ಪರೀಕ್ಷೆ ನಡೆಸಲಿ ಎಂದು ಶಿವಕುಮಾರ್ ಸವಾಲು ಹಾಕಿದರು.

ರಾಜ್ಯದ 7 ಜಿಲ್ಲೆಗಳ 8 ನಗರಗಳಲ್ಲಿ ಕೊರೋನ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಮನಸೋ ಇಚ್ಛೆ ಸರಕಾರ ನಿರ್ಣಯ ಕೈಗೊಳ್ಳುತಿದೆ. ಮಾಡಬಾರದನ್ನೆಲ್ಲಾ ಮಾಡಿ ದೇಶ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಈಗ ಸರ್ವಪಕ್ಷಗಳ ಸಭೆ ಕರೆಯುವುದಾಗಿ ಹೇಳುತ್ತಿದ್ದಾರೆ. ಏಕೆ ಬೇಕು ಆ ಸಭೆ ಎಂದು ಪ್ರಶ್ನಿಸಿದ ಅವರು, ಸಾರಿಗೆ ಬಸ್‍ಗಳಲ್ಲಿ ಪೂರ್ತಿ ಜನರನ್ನು ತುಂಬುತ್ತಿದ್ದರು. ಆದರೆ, ಚಲನಚಿತ್ರ ಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಸೀಟು ಭರ್ತಿ ಮಾಡಬೇಕು ಎಂದು ನಿಯಮ ಮಾಡಿದ್ದಾರೆ ಎಂದು ಟೀಕಿಸಿದರು.

ಮಾತುಕತೆ ಮಾಡಿ: ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ಸಾರಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದು, ಸಚಿವರ ಜಿಲ್ಲೆಯಲ್ಲೇ ಈ ರೀತಿಯಾದರೆ ಬೇರೆ ಜಿಲ್ಲೆ ಪರಿಸ್ಥಿತಿ ಏನು? ಸಾರಿಗೆ ನೌಕರರನ್ನು ಕರೆದು ಮಾತನಾಡಬೇಕು. ಸಾರಿಗೆ ನೌಕರರನ್ನು ಕುಟುಂಬ ಸದಸ್ಯರಂತೆ ನೋಡಬೇಕು. ಎಲ್ಲ ನೌಕರರ ಮೇಲೆ ಸಂಶಯ ಪಡಬೇಡಿ ಎಂದು ಶಿವಕುಮಾರ್ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ವಾತಾವರಣ ಇದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ದುರಾಡಳಿತಕ್ಕೆ ಸ್ಪಷ್ಟ ಸಂದೇಶ ನೀಡಲು ಜನ ಕಾಯುತ್ತಿದ್ದಾರೆ. ಬೆಳಗಾವಿಗೆ ಹೊರಗಡೆಯವರು ಬಂದು ರಾಜಕೀಯ ಮಾಡುವುದು ಸ್ಥಳೀಯ ಬಿಜೆಪಿ ನಾಯಕರಿಗೆ ಇಷ್ಟ ಆಗುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News