ಚಿಕ್ಕಮಗಳೂರು: ಗಲಾಟೆಯಲ್ಲಿ ಗಾಯಗೊಂಡಿದ್ದ ಯುವಕ ಮೃತ್ಯು; ಘಟನೆಗೆ ಕೋಮು ಬಣ್ಣ ಬಳಿದ ಸಂಘಪರಿವಾರ ಸಂಘಟನೆಗಳು

Update: 2021-04-09 13:31 GMT
ಮೃತ ಯುವಕ ಮನೋಜ್

ಚಿಕ್ಕಮಗಳೂರು, ಎ.9: ಒಂದೇ ಕೋಮಿನ ಯುವಕರ ಗುಂಪಿನ ನಡುವೆ ನಡೆಯುತ್ತಿದ್ದ ಹೊಡೆದಾಟ ತಡೆಯಲು ಮುಂದಾದ ಮತ್ತೊಂದು ಕೋಮಿನ ಯುವಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ. ಈ ವಿಚಾರ ತಿಳಿದ ಸಂಘಪರಿವಾರ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ನಗರದಲ್ಲಿ ಶುಕ್ರವಾರ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರ ಮುಂಜಾಗ್ರತಾ ಕ್ರಮದಿಂದಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಬಾಡಿ ಬಿಲ್ಡರ್ ಆಗಿದ್ದ ಮನೋಜ್ ಮೃತ ಯುವಕ. ಮನೋಜ್ ನ ಸ್ನೇಹಿತ ನಿಹಾಲ್ ಎಂಬಾತನ ತಂಗಿಗೆ ಅಯ್ಯಪ್ಪ ನಗರದ ಫರೀದ್ ಎಂಬಾತ ಮೊಬೈಲ್‍ ನಲ್ಲಿ ಸಂದೇಶ ಕಳುಹಿಸಿದ್ದು, ಇದನ್ನು ಗಮನಿಸಿದ ನಿಹಾಲ್ ಕುಪಿತನಾಗಿ ಬುಧವಾರ ರಾತ್ರಿ ಮನೋಜ್ ಹಾಗೂ ಇತರ ಸ್ನೇಹಿತರೊಂದಿಗೆ ಫರೀದ್‍ನನ್ನು ವಿಚಾರಿಸಲು ಹೋಗಿದ್ದಾರೆ. ಈ ವೇಳೆ ಫರೀದ್ ಹಾಗೂ ನಿಹಾಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ತಾರಕಕ್ಕೇರಿ ಎರಡೂ ಕಡೆಯ ಯುವಕರು ಹೊಡೆದಾಡಿಕೊಂಡಿದ್ದಾರೆ.

ನಿಹಾಲ್ ಜೊತೆಗಿದ್ದ ಮನೋಜ್ ಹೊಡೆದಾಟ ತಡೆಯಲು ಮುಂದಾಗಿದ್ದು, ಈ ವೇಳೆ ಫರೀದ್ ಮತ್ತು ಆತನ ಸ್ನೇಹಿತರು ಮನೋಜ್ ಮೇಲೆ ಹಲ್ಲೆ ಮಾಡಿದ್ದಲ್ಲದೇ ರಾಡ್‍ನಿಂದ ತಲೆಗೆ ಹೊಡೆದಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡ ಮನೋಜ್ ಕುಸಿದು ಬಿದ್ದಿದ್ದಾನೆ. ಕೂಡಲೇ ಮನೋಜ್‍ನನ್ನು ಸ್ನೇಹಿತರು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಮನೋಜ್‍ನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದೊಯ್ಯವಂತೆ ಸೂಚಿಸಿದ್ದರಿಂದ ಮನೋಜ್‍ನನ್ನು ಹಾಸನದ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಹಾಸನದ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರಿಂದ ಗುರುವಾರ ಸಂಜೆ ಮನೋಜ್‍ನನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆ ಮನೋಜ್ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.

ಮೃತದೇಹವನ್ನು ಗುರುವಾರ ರಾತ್ರಿ ಮರಳಿ ನಗರದ ಸರಕಾರಿ ಆಸ್ಪತ್ರೆಗೆ ತರಲಾಗಿದ್ದು, ಹಲ್ಲೆಯಿಂದ ಯುವಕ ಮೃತಪಟ್ಟಿರುವ ವಿಚಾರ ನಗರಾದ್ಯಂತ ಹಬ್ಬುತ್ತಿದ್ದಂತೆ ಸಂಘಪರಿವಾರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ನಗರದ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಜಮಾಯಿಸಿ, ಮೃತ ಯುವಕ ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತ ಎಂದು ವಾದಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ವಿಷಯದ ಗಂಭೀರತೆಯನ್ನು ಅರಿತ ಪೊಲೀಸರು ಶುಕ್ರವಾರ ಮೃತದೇಹದ ಮರುಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಒಪ್ಪಿಸುವ ಪ್ರಯತ್ನ ನಡೆಸಿದಾಗ ಸಂಘಪರಿವಾರ ಸಂಘಟನೆಗಳ ಮುಖಂಡರು ಮೃತದೇಹವನ್ನು ಪಡೆಯದೇ ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ. ನಂತರ ನಗರದ ಆಜಾದ್ ಪಾರ್ಕ್ ವೃತ್ತಕ್ಕೆ ಆಗಮಿಸಿ, ಸಂಘಪರಿವಾರ ಸಂಘಟನೆಯ ಯುವಕನನ್ನು ಅನ್ಯಕೋಮಿನ ಯುವಕರು ಕೊಲೆ ಮಾಡಿದ್ದಾರೆಂದು ಆರೋಪಿಸಿ, ಆರೋಪಿಗಳ ಬಂಧನಕ್ಕೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆಂದು ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಸಂಘಪರಿವಾರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಉದ್ರಿಕ್ತರ ತಂಡ ಪೊಲೀಸ್ ಬಂದೋಬಸ್ತ್ ಭೇದಿಸಿ ನಗರದ ಎಂಜಿ ರಸ್ತೆಗೆ ತೆರಳಿ ಅಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ. ಅಲ್ಲದೇ ಎಂ.ಜಿ ರಸ್ತೆಯಲ್ಲಿರುವ ಕನ್ನಿಕಾ ಪರಮೇಶ್ವರ ದೇವಾಲಯದ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಬಿಜೆಪಿ ಮುಖಂಡ ದೇವರಾಜ್ ಶೆಟ್ಟಿ ಎಂಬವರ ಕೈ, ಕಾಲಿಗೆ ಬೆಂಕಿ ತಗಲಿದ ಘಟನೆಯೂ ನಡೆಯಿತು.

ಬಳಿಕ ಉದ್ರಿಕ್ತ ಪ್ರತಿಭಟನಾಕಾರರ ಗುಂಪು ಪಕ್ಕದ ಮುಸ್ಲಿಮರು ಹೆಚ್ಚಿರುವ ಅಂಡೇಛತ್ರ ಬಡಾವಣೆ ತೆರಳಿ ಅಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲು ಒತ್ತಾಯಿಸಿದ್ದಲ್ಲದೇ ಅಲ್ಲೂ ಪ್ರತಿಭಟನೆ ಮಾಡಿದ್ದಾರೆ. ನಂತರ ಅಲ್ಲಿಂದ ಉದ್ರಿಕ್ತರ ಗುಂಪು ಮುಖಂಡ ದೇವರಾಜ್‍ ಶೆಟ್ಟಿ, ಶ್ರೀರಾಮಸೇನೆ ಮುಖಂಡ ರಂಜಿತ್ ಶೆಟ್ಟಿ ನೇತೃತ್ವದಲ್ಲಿ ನಗರದ ಹನುಮಂತಪ್ಪ ವೃತ್ತದಲ್ಲಿ ಸಮಾವೇಶಗೊಂಡು ಧರಣಿ ನಡೆಸಿತು.

'ಇತ್ತೀಚಿನ ದಿನಗಳಲ್ಲಿ ಅನ್ಯಕೋಮಿನವರಿಂದ ಹಿಂದೂ ಸಮಾಜದ ಮೇಲೆ ನಿರಂತರ ದಾಳಿ ನಡೆಯುತ್ತಿದೆ, ಪೊಲೀಸರು ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಪರಿಗಣಿಸುವುದು ಬೇಡ. ಘಟನೆಯಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಸರಕಾರ 20 ಲಕ್ಷ ರೂ. ಪರಿಹಾರ ನೀಡಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಘಟನೆ ಸಂಬಂಧ ನಾಲ್ಕು ಜನರ ಪೈಕಿ ಓರ್ವ ಆರೋಪಿಯನ್ನು ಈಗಾಗಲೇ ಬಂಧಿಸಿದ್ದು, ಉಳಿದ ಆರೋಪಿಗಳನ್ನು ಎರಡು ದಿನಗಳ ಅವಧಿಯಲ್ಲಿ ಬಂಧಿಸದಿದ್ದರೆ ನಗರದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಆಕ್ರೋಶ: ಚಿಕ್ಕಮಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತ ನಿರೀಕ್ಷಕ ಸಲೀಂ ಅಬ್ಬಾಸ್ ಅವರು ಒಂದು ಕೋಮಿನ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಅವರು ನಿರ್ಲಕ್ಷ್ಯ ತೋರುತ್ತಿದ್ದು, ಅವರನ್ನು ಕೂಡಲೇ ಅಮಾನತು ಗೊಳಿಸಬೇಕೆಂದು ಪ್ರತಿಭಟನಕಾರರು ಇದೇ ವೇಳೆ ಒತ್ತಾಯಿಸಿದರು.

ಈ ವೇಳೆ ಎಸ್ಪಿ ಸ್ಥಳಕ್ಕಾಗಮಿಸಿ ಆರೋಪಿಗಳ ಶೀಘ್ರ ಬಂಧನದ ಭರವಸೆ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ಪ್ರತಿಭಟನಾಕಾರರು ಮನೋಜ್ ಮೃತದೇಹದ ಮೆರವಣಿಗೆ ನಡೆಸಿದರು. ಬಳಿಕ ಕುಟುಂಬಸ್ಥರು ಮನೋಜ್ ಮೃತದೇಹದ ಶವಸಂಸ್ಕಾರ ನಡೆಸಿದರು.

ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸುತ್ತೇವೆ. ಈ ಘಟನೆಯನ್ನು ಬೇರೆ ರೀತಿ ಬಿಂಬಿಸಿ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸಕ್ಕೆ ಯಾರೇ ಮುಂದಾದರೂ ಕಾನೂನು ಕ್ರಮಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣ ಸಂಬಂಧ ಸುಳ್ಳು ಸುದ್ದಿ ಹರಿದು ಬಿಡಲಾಗುತ್ತಿದ್ದು, ಇದನ್ನು ಯಾರೂ ನಂಬಬಾರದು. ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು.
-ಎಂ.ಎಚ್.ಅಕ್ಷಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬುಧವಾರ ಸಂಜೆ ಇಬ್ಬರು ಸ್ನೇಹಿತರು ಮನೋಜ್‍ನನ್ನು ಕೆರದುಕೊಂಡು ಹೋದರು. ಮಗ ಮರಳಿ ಮನೆಗೆ ಬರಲಿಲ್ಲ, ರಾತ್ರಿ 8ರ ಸಮಯದಲ್ಲಿ ಮನೋಜ್‍ನ ಇಬ್ಬರು ಸ್ನೇಹಿತರು ಬಂದು ನಿಮ್ಮ ಮಗನಿಗೆ ಸ್ವಲ್ಪ ಪೆಟ್ಟಾಗಿದೆ, ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದರು. ಆಸ್ಪತ್ರೆಗೆ ಹೋಗಿ ನೋಡಿದಾಗ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ವೈದ್ಯರ ಸೂಚನೆ ಮೇರೆಗೆ ಹಾಸನಕ್ಕೆ ಕರೆದೊಯ್ಯಲಾಯಿತು. ಬೆಂಗಳೂರಿಗೆ ಕೆರೆದೊಯ್ಯುವಾಗ ಮಗ ಮೃತಪಟ್ಟಿದ್ದಾನೆ. ನಾಲ್ಕು ಜನರು ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದು, ಅವರಿಗೆ ಶಿಕ್ಷೆಯಾಗಬೇಕು.
-ಸುಂದರಿ, ಮೃತ ಮನೋಜ್ ತಾಯಿ

ಮೃತ ಯುವಕ ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತನಲ್ಲ
ಮೃತ ಯುವಕ ಮನೋಜ್ ಬಾಡಿ ಬಿಲ್ಡರ್ ಆಗಿದ್ದು, ಈ ಕ್ಷೇತ್ರದಲ್ಲೇ ಸಾಧನೆ ಮಾಡುವ ಕನಸು ಕಂಡಿದ್ದ. ಮನೋಜ್‍ನ ಸ್ನೇಹಿತರ ಪೈಕಿ ಮುಸ್ಲಿಂ ಸ್ನೇಹಿತರೇ ಹೆಚ್ಚಿದ್ದು, ಅವರೊಂದಿಗೇ ಹೆಚ್ಚು ಕಾಲ ಕಳೆಯುತ್ತಿದ್ದ. ಅಲ್ಲದೇ ಯುವಕ ಯಾವುದೇ ಸಂಘಪರಿವಾರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರಲಿಲ್ಲ ಎಂದು ತಿಳಿದುಬಂದಿದೆ.

ಆದರೆ ಯುವಕ ಮೃತಪಟ್ಟ ಸುದ್ದಿ ತಿಳಿದ ಬಳಿಕ ಸಂಘಪರಿವಾರ ಸಂಘಟನೆಗಳು ಮುಖಂಡರು ಈ ಘಟನೆಗೆ ಕೋಮು ಬಣ್ಣ ಬಳಿದು ಕೋಮು ಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದರೆಂಬ ಆರೋಪಗಳು ಸಾರ್ವಜನಿಕರ ವಲಯದಿಂದ ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಪೊಲೀಸರ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News