3ನೇ ದಿನವೂ ಮುಂದುವರಿದ ಸಾರಿಗೆ ನೌಕರರ ಮುಷ್ಕರ: ಸರಕಾರಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್‍ಗಳ ದರ್ಬಾರ್
ಬೆಂಗಳೂರು, ಎ.9: ಆರನೆ ವೇತನ ಆಯೋಗದ ಶಿಫಾರಸು ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹಾಗೂ ಸಾರಿಗೆ ಸಂಸ್ಥೆ ನೌಕರರ ಬಿಗಿಪಟ್ಟು 3ನೆ ದಿನವೂ ಮುಂದುವರಿದಿರುವುದರಿಂದ ಪ್ರಯಾಣಿಕರು ಸರಕಾರಿ ಬಸ್‍ಗಳಿಲ್ಲದೆ ಪರದಾಡುವಂತಹ ಪರಿಸ್ಥಿತಿ ಉಂಟಾಯಿತು.
ಮತ್ತೊಂದು ಕಡೆ ಖಾಸಗಿ ಬಸ್‍ಗಳು ರಾಜ್ಯದ ಸರಕಾರಿ ಬಸ್ ನಿಲ್ದಾಣಗಳಲ್ಲಿ ನಿಂತಿವೆಯಾದರೂ ಜನರು ಸರಕಾರಿ ಬಸ್‍ಗಳು ಇಲ್ಲ ಎಂಬ ಕಾರಣಕ್ಕೆ ಬಸ್ ನಿಲ್ದಾಣಗಳ ಕಡೆಗೆ ಹೆಚ್ಚಾಗಿ ಬರುತ್ತಿಲ್ಲ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಸೇರಿ ರಾಜ್ಯದ ಇತರೆ ಬಸ್ ನಿಲ್ದಾಣಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಬಸ್‍ಗಳಿಗೆ ಕಾಯುತ್ತಾ ನಿಂತಿರುವ ದೃಶ್ಯ ಕಂಡು ಬಂದಿತು.
ಬಸ್ ನಿಲ್ದಾಣಗಳ ಹೊರಗಡೆ ನಿಂತಿದ್ದ ಖಾಸಗಿ ಬಸ್‍ಗಳು, ಆಟೋ, ಟ್ಯಾಕ್ಸಿ ಇನ್ನಿತರೆ ವಾಹನಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಕೂಲಿ ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ದುಪ್ಪಟ್ಟು ಹಣವನ್ನು ನೀಡಲಾಗದೆ ಮತ್ತೊಂದು ದಿನ ಊರಿಗೆ ಹೋದರಾಯಿತು ಎಂದು ಮನೆ ಕಡೆಗೆ ಮುಖ ಮಾಡಿದರೆ, ಅನಿವಾರ್ಯತೆ ಇದ್ದವರು ದುಪ್ಪಟ್ಟು ಹಣವನ್ನು ನೀಡಿಯೇ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ, ಪ್ರಯಾಣಿಕರು ಸರಕಾರ, ಸಾರಿಗೆ ನೌಕರರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಸಾರಿಗೆ ಇಲಾಖೆ ಅಧಿಕಾರಿಗಳು ಮುಷ್ಕರದಲ್ಲಿ ನಿರತರಾಗಿರುವ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಆದರೆ, ಆ ನೋಟಿಸ್‍ಗೆ ಸಿಬ್ಬಂದಿಗಳು ಯಾವುದೇ ಉತ್ತರವನ್ನು ನೀಡಿಲ್ಲ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಜನರು ರಾಜಧಾನಿಯಿಂದ ಇತರೆ ಜಿಲ್ಲೆಗಳಿಗೆ ತೆರಳಲು ಮುಂದಾಗಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಬಿಎಂಟಿಸಿ, ಕೆಎಸ್ಸಾರ್ಟಿಸಿ ಸೇರಿ ನಾಲ್ಕು ವಿಭಾಗಗಳ ಬಸ್‍ಗಳು ಮುಷ್ಕರದಿಂದಾಗಿ ನಿಂತಲ್ಲೆ ನಿಂತಿವೆ. ಜನರು ಖಾಸಗಿ ಬಸ್‍ಗಳಿಗೆ ದುಪ್ಪಟ್ಟು ಹಣವನ್ನು ನೀಡಿ ತಮ್ಮ ಊರುಗಳಿಗೆ ತಲುಪಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಚಾಲಕ ಆತ್ಮಹತ್ಯೆಗೆ ಯತ್ನ
ಸಾರಿಗೆ ನೌಕರರ ಮುಷ್ಕರದ ನಡುವೆಯೇ ಕರ್ತವ್ಯಕ್ಕೆ ಹಾಜರಾಗಬೇಕೆಂಬ ಹಿರಿಯ ಅಧಿಕಾರಿಗಳ ಒತ್ತಡಕ್ಕೆ ನೊಂದು ಚಾಲಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗದಗ ನಗರದ ಹುಡ್ಕೊ ಕಾಲನಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಬಸ್ ಚಾಲಕನನ್ನು ವಸಂತ ರಾಮದುರ್ಗ(48) ಎಂದು ಗುರುತಿಸಲಾಗಿದೆ.
536 ಬಸ್‍ಗಳ ಸಂಚಾರ
ಶುಕ್ರವಾರ ಕೆಎಸ್ಸಾರ್ಟಿಸಿ-214, ಬಿಎಂಟಿಸಿ-75, ಎನ್‍ಇಕೆಆರ್‍ಟಿಸಿ-172, ಎನ್‍ಡಬ್ಲ್ಯುಕೆಆರ್ ಟಿಸಿ-75 ಬಸ್‍ಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
42 ಕೋಟಿ ರೂ. ನಷ್ಟ
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಕಳೆದ 3 ದಿನಗಳಲ್ಲಿ ಕೆಎಸ್ಸಾರ್ಟಿಸಿ ಸೇರಿ ನಾಲ್ಕು ನಿಗಮಗಳಿಗೆ 42 ಕೋಟಿ ರೂ. ನಷ್ಟ ಉಂಟಾಗಿದ್ದು, ಪ್ರತಿದಿನ ಸರಾಸರಿ 7 ಕೋಟಿ ರೂ. ನಷ್ಟವಾಗಿದೆ. ಬಿಎಂಟಿಸಿಗೆ ಕಳೆದ 3 ದಿನದ ಮುಷ್ಕರದಿಂದ 9 ಕೋಟಿ ನಷ್ಟ ಆಗಿದೆ.