ಸರಕಾರದ ಬೆದರಿಕೆಗೆ ಸಾರಿಗೆ ನೌಕರರು ಹೆದರುವುದಿಲ್ಲ, ಮುಷ್ಕರ ಮುಂದುವರಿಯಲಿದೆ: ಕೋಡಿಹಳ್ಳಿ ಚಂದ್ರಶೇಖರ್

Update: 2021-04-09 14:36 GMT

ಬೆಂಗಳೂರು, ಎ.9: ಸಾರಿಗೆ ನೌಕರರ ಮುಷ್ಕರ ಮುಂದುವರಿದಿದ್ದು, ಸಮಸ್ಯೆಗಳೂ ಎದುರಾಗಿವೆ. ಇಂಥ ವೇಳೆಯಲ್ಲಿ ದಿಟ್ಟತನದಿಂದ ಹೋರಾಡಿ ಪರಿಹಾರ ಕಂಡುಕೊಳ್ಳಬೇಕೇ ವಿನಹ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗಬಾರದೆಂದು ಕೆಎಸ್ಸಾರ್ಟಿಸಿ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿನಂತಿ ಮಾಡಿಕೊಂಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರ ವೇತನ ಶ್ರೇಣಿಯ ವ್ಯತ್ಯಾಸ ಮಾಡುತ್ತಿದೆ. ಸಾರಿಗೆ ನೌಕರರ ವಿಚಾರದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಗುರುವಾರದ ಸಭೆಯಲ್ಲಿ ಯಾವುದೇ ತೀರ್ಮಾನಗಳು ಆಗಿಲ್ಲ. ರಾಜ್ಯ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸಲೇಬೇಕು ಎಂದು ಒತ್ತಾಯಿಸಿದರು.

ಸಾರಿಗೆ ನೌಕರರಿಗೆ ಮನೆ ಖಾಲಿ ಮಾಡುವಂತೆ ಮತ್ತು ಕೆಲಸ ಮಾಡದಿದ್ದರೆ ಸೇವೆಯಿಂದ ವಜಾ ಮಾಡುತ್ತೇವೆ ಎಂದು ನೋಟಿಸ್ ನೀಡಿ ಸರಕಾರ ಬೆದರಿಸಲು ಯತ್ನಿಸುತ್ತಿದೆ. ಇಂತಹ ಬೆದರಿಕೆಗೆ ಸಾರಿಗೆ ನೌಕರರು ಹೆದರುವುದಿಲ್ಲ ಎಂದು ಹೇಳಿದರು.

ಸಾರಿಗೆ ನಿಗಮಗಳನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ಕೇಂದ್ರ ಸರಕಾರವು ಕೃಷಿ ಕ್ಷೇತ್ರವನ್ನು ಖಾಸಗೀಕರಣ ಮಾಡುತ್ತಿದೆ. ರಾಜ್ಯ ಸರಕಾರ ಸಾರಿಗೆ ನಿಗಮಗಳನ್ನು ಖಾಸಗೀಕರಣ ಮಾಡುತ್ತಿದೆ. ಖಾಸಗೀಕರಣ ತಪ್ಪಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಪ್ರಯತ್ನ, ಮುಷ್ಕರ, ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದರು.

‘ಬಿಎಂಟಿಸಿ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ನನಗೆ ತೊಂದರೆಯಾಗಿದೆ’ ಎಂದು ವಿದ್ಯಾರ್ಥಿನಿಯೊಬ್ಬರು 10 ಲಕ್ಷ ಪರಿಹಾರ ಕೇಳಿ ಲೀಗಲ್ ನೋಟಿಸ್ ನೀಡಿರುವ ವಿಚಾರದ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ಆಕೆಗೆ ಆಗಿರುವ ತೊಂದರೆಗೆ ಬಿಎಂಟಿಸಿಯೇ ಜವಾಬ್ದಾರಿ. ಪಾಸ್‍ಗೆ ಹಣ ಪಡೆದಿರುವುದು ಬಿಎಂಟಿಸಿ. ಯಾವುದೇ ಲಾಭ, ನಷ್ಟವಾದರೂ ಅದಕ್ಕೆ ಅವರೇ ಹೊಣೆ. ವಿದ್ಯಾರ್ಥಿಗಳು ಕೇಳುವುದರಲ್ಲಿ ನ್ಯಾಯ ಇದೆ. ವೇತನ ಹೆಚ್ಚಳಕ್ಕೆ ನಾವು ಮುಷ್ಕರ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News