×
Ad

ಸರಕಾರ ಮೊಂಡುತನ ಬಿಟ್ಟು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲಿ: ಎಚ್.ಡಿ.ಕುಮಾರಸ್ವಾಮಿ

Update: 2021-04-09 20:08 IST

ಬಸವಕಲ್ಯಾಣ, ಎ.9: ನಾನು ಕಳೆದ ಎರಡು ದಿನಗಳಿಂದ ಹೇಳುತ್ತಲೇ ಇದ್ದೇನೆ ಈ ಸರಕಾರಕ್ಕೆ, ಮೊಂಡುತನವನ್ನು ಬಿಟ್ಟು ವಿಶ್ವಾಸದ ಮುಖಾಂತರ ಸಾರಿಗೆ ನೌಕರರ ಸಂಘದ ಮುಖಂಡರನ್ನು ಮಾತುಕತೆಗೆ ಕರೆದು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರಕಾರಕ್ಕೆ ಇಲ್ಲಿಯವರೆಗೆ ಪ್ರತಿನಿತ್ಯ ಜನ ಸಾಮಾನ್ಯರು ಅನುಭವಿಸುತ್ತಿರುವ ಯಾತನೆ, ಸಮಸ್ಯೆಗಳ ಬಗ್ಗೆ ಅನುಭವ ಇಲ್ಲ. ಇವರೆಗೆ ಚುನಾವಣೆಯೇ ಆದ್ಯತೆಯಾಗಿದೆಯೇ ಹೊರತು, ಬೇರೆ ಯಾವುದು ಇಲ್ಲ ಎಂದರು.

ಈ ಸರಕಾರಕ್ಕೆ ಲೂಟಿ ಹೊಡೆಯುವ ಅವಕಾಶವಿದ್ದಾಗ ಬಹಳ ಆಸಕ್ತಿ ವಹಿಸುತ್ತಾರೆ. ಈಗ ಲೂಟಿ ಹೊಡೆಯಲು ಏನು ಇಲ್ಲ. ಅದಕ್ಕೆ ಮುಷ್ಕರದ ಸಮಸ್ಯೆ ಬಗೆಹರಿಸಲು ಆಸಕ್ತಿ ತೋರದೆ ಮುಂದುವರಿಯುತ್ತಿದ್ದಾರೆ. ಯಾರಿಗೂ ಯಾವ ಅಧಿಕಾರವು ಶಾಶ್ವತವಲ್ಲ. ಮುಖ್ಯಮಂತ್ರಿ ಈ ಉದ್ಧಟತನ ಬಿಡದಿದ್ದರೆ ದೊಡ್ಡ ಪ್ರಾಯಶ್ಚಿತ ಅನುಭವಿಸುತ್ತಾರೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಸಾರಿಗೆ ನೌಕರರು ಕಷ್ಟದಲ್ಲಿರುವ ಶ್ರಮ ಜೀವಿಗಳು, ಸರಕಾರದ ಪರಿಸ್ಥಿತಿಯನ್ನು ಅವರಿಗೆ ವಿವರಿಸಿ, ಅವರ ಮನವೊಲಿಸಿ, ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲವನ್ನು ತಪ್ಪಿಸುವುದು ಸರಕಾರದ ಜವಾಬ್ದಾರಿ. ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲದಿದ್ದರೆ ಈ ಸರಕಾರ ಅಧಿಕಾರದಲ್ಲಿ ಇರುವುದಾದರೂ ಏಕೆ? ಎಂದು ಅವರು ಕಿಡಿಗಾರಿದರು.

ನೈಟ್ ಕರ್ಫ್ಯೂ ಇಂದ ಏನು ಪ್ರಯೋಜನ?: ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಸರಕಾರ ನೈಟ್ ಕರ್ಫ್ಯೂವನ್ನು ಹೇರಿರುವುದು ಎಷ್ಟರ ಮಟ್ಟಿಗೆ ಪ್ರಯೋಜನಕಾರಿಯಾಗಲಿದೆ ಅನ್ನೋದು ಗೊತ್ತಿಲ್ಲ. ಸಾರ್ವಜನಿಕವಾಗಿ ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯುವ ಚಟುವಟಿಕೆಗಳಲ್ಲಿನ ಲೋಪಗಳನ್ನು ಇಟ್ಟುಕೊಂಡು ನೈಟ್ ಕರ್ಫ್ಯೂ ಮಾಡುವುದರಿಂದ, ಇವರ ಉದ್ದೇಶ ಎಷ್ಟರಮಟ್ಟಿಗೆ ಸಫಲವಾಗುತ್ತೆ ಅನ್ನೋದನ್ನು ಕಾದು ನೋಡಬೇಕು ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News