ಸುಳ್ಳು ಹೇಳುವುದಕ್ಕಾಗಿ ಪ್ರಧಾನಿ ಮೋದಿಗೆ ನೊಬೆಲ್ ಪ್ರಶಸ್ತಿ ನೀಡಬೇಕು: ಸಿದ್ದರಾಮಯ್ಯ

Update: 2021-04-09 15:36 GMT

ಬೆಳಗಾವಿ, ಎ.9: ಸ್ವತಂತ್ರ ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ಮತ್ತೊಬ್ಬ ಪ್ರಧಾನಿಯನ್ನು ನಾವು ಕಂಡಿಲ್ಲ. ನರೇಂದ್ರ ಮೋದಿಗೆ ಸುಳ್ಳು ಹೇಳುವುದಕ್ಕಾಗಿಯೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಶುಕ್ರವಾರ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗಳಿಗೆ 15 ಲಕ್ಷ ರೂ.ಗಳನ್ನು ಜಮೆ ಮಾಡುವುದಾಗಿ ಹೇಳಿದ್ದರು. ಆದರೆ, 15 ಪೈಸೆಯನ್ನೂ ಜಮಾ ಮಾಡಲಿಲ್ಲ ಎಂದರು.

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಆದರೆ, ಈ ಪುಣ್ಯಾತ್ಮ ಈವರೆಗೆ ಒಂದೇ ಒಂದು ಬಾರಿಯೂ ಬೆಲೆ ಏರಿಕೆ ಬಗ್ಗೆ ತುಟಿ ಬಿಚ್ಚಿಲ್ಲ. ಪ್ರಧಾನಿ ನರೇಂದ್ರ ಮೋದಿ ಸುಳ್ಳನ್ನೆ ಸತ್ಯವೆಂದು ಬಿಂಬಿಸಲು ಹಿಟ್ಲರ್ ನೀತಿ ಅನುಸರಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ಮೋದಿಯ ಮಾತುಗಳಿಗೆ ಮರುಳಾಗಿ ನಮ್ಮ ದೇಶದ ಯುವಕರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದರು. ಆದರೆ, ಇರುವ ಉದ್ಯೋಗಗಳನ್ನು ಕಸಿದುಕೊಂಡು ಯುವಕರನ್ನು ಬೀದಿ ಪಾಲು ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಮಹಾದಾಯಿ, ಕಳಸಾ ಬಂಡೂರಿ ಯೋಜನೆಗೆ ಅನುಮತಿ ಕೋರಿ ಕೇಂದ್ರ ಸರಕಾರದ ಬಳಿ ನಾನು ಮುಖ್ಯಮಂತ್ರಿಯಾಗಿದ್ದಾಗ ನಿಯೋಗ ತೆಗೆದುಕೊಂಡು ಹೋದರೆ, ಪ್ರಧಾನಿ ಮೋದಿ ‘ದೇಖೇಂಗೆ’ ಅಂದ್ರು. ಆದರೆ, ಏನು ಮಾಡಲಿಲ್ಲ. ಕೊರೋನ ಸೋಂಕು ಹರಡುವುದನ್ನು ತಡೆಗಟ್ಟಿ ಎಂದು ಕೇಳಿದರೆ, ಜಾಗಟೆ ಬಾರಿಸಿ, ದೀಪ ಹಚ್ಚಿ, ಚಪ್ಪಾಳೆ ಹೊಡಿರಿ ಎನ್ನುತ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ, ರಾಜ್ಯದ ಖಾಜನೆಯನ್ನು ಖಾಲಿ ಮಾಡಿ, ಆರ್ಥಿಕ ದಿವಾಳಿ ಎಬ್ಬಿಸಲು ಹೊರಟಿದೆ. ಯಡಿಯೂರಪ್ಪ ಚೆಕ್ ಮೂಲಕ ಹಣ ಪಡೆದರೆ, ಅವರ ಮಗ ಆರ್‍ಟಿಜಿಎಸ್ ಮೂಲಕ ಹಣ ಪಡೆಯುತ್ತಿದ್ದಾನೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ನನ್ನ ಐದು ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ. ಆದರೆ, ಯಡಿಯೂರಪ್ಪ ಸರಕಾರದಲ್ಲಿ ರಾಜ್ಯದ ಖಜಾನೆ ಲೂಟಿಯಾಗುತ್ತಿದೆ. ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರಶ್ನಿಸಿದರೆ ಪ್ರತಿಯೊಂದಕ್ಕೂ ಕೊರೋನ ಅನ್ನುತ್ತಾರೆ. ಯಡಿಯೂರಪ್ಪ ಹಸಿರು ಶಾಲು ಹಾಕಿಕೊಳ್ಳುತ್ತಾರೆ. ಆದರೆ, ರೈತರ ಸಾಲ ಮನ್ನಾ ಮಾಡಿ ಅಂದರೆ ನಮ್ಮ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ ಅನ್ನುತ್ತಾರೆ. ಸಚಿವ ಈಶ್ವರಪ್ಪ ಮನೆಯಲ್ಲಿ ನೋಟು ಎಣಿಸುವ ಯಂತ್ರ ಸಿಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಡವರು ಎರಡು ಹೊತ್ತಿನ ಊಟ ತಿನ್ನಲಿ ಎಂದು ಆರಂಭಿಸಿದ ಇಂದಿರಾ ಕ್ಯಾಂಟೀನ್ ಮುಚ್ಚುತ್ತಿದ್ದಾರೆ. ಮಾನ ಮರ್ಯಾದೆ ಇದ್ದರೆ ಅಧಿಕಾರದಿಂದ ಕೆಳಗಿಳಿಯಬೇಕು. ನರೇಂದ್ರ ಮೋದಿ, ಯಡಿಯೂರಪ್ಪ ಇಬ್ಬರೂ ರೈತರ ಸಾಲ ಮನ್ನಾ ಮಾಡಲ್ಲ. ಇವರು ಬಡವರು, ರೈತರ ವಿರೋಧಿಗಳು ಎಂದು ಸಿದ್ದರಾಮಯ್ಯ ಗುಡುಗಿದರು.

2023ರಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ನಾವು 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ. ಯಡಿಯೂರಪ್ಪ ಸರಕಾರ ಹೇಡಿ ಸರಕಾರ. ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ಬಿಜೆಪಿ ಸಂಸದರು ಒಬ್ಬರೂ ಮೋದಿ ಮುಂದೆ ಮಾತನಾಡಲ್ಲ. ಈ ಭಾಗದ ಸಂಸದರಾಗಿ ಆಯ್ಕೆಯಾಗಿ ಹೋದ ಸುರೇಶ್ ಅಂಗಡಿ ಯಾವತ್ತಾದರೂ ಸಂಸತ್ತಿನಲ್ಲಿ ಮಾತನಾಡಿದ್ದಾರಾ? ಇನ್ನು ಅವರ ಪತ್ನಿ ಸಂಸತ್‍ಗೆ ಹೋಗಿ ಏನು ಮಾಡುತ್ತಾರೆ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಆದುದರಿಂದ, ನಮ್ಮ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯಲ್ಲಿ ವಿಧಾನಪರಿಷ್ ಸದಸ್ಯರಾಗಿ, ಶಾಸಕರಾಗಿ, ಸಚಿವರಾಗಿ ತಮ್ಮದೇ ಆದ ರೀತಿಯಲ್ಲಿ ಜನಪರವಾದ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಇವರನ್ನು ಸಂಸತ್ತಿಗೆ ನಿಮ್ಮ ಪ್ರತಿನಿಧಿಯಾಗಿ ಕಳುಹಿಸಿಕೊಟ್ಟರೆ, ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎಂ.ಬಿ.ಪಾಟೀಲ್, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಂಸದ ಎನ್.ಚಂದ್ರಪ್ಪ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಕಾರಿಗೆ ಅಭಿಮಾನಿಗಳ ಮುತ್ತಿಗೆ

ಸವದತ್ತಿಯಲ್ಲಿ ಪ್ರಚಾರ ಸಭೆಯನ್ನು ಮುಗಿಸಿ ತೆರಳುತ್ತಿದ್ದ ಸಿದ್ದರಾಮಯ್ಯ ಕಾರಿಗೆ ಅಭಿಮಾನಿಗಳೂ ಮುತ್ತಿಗೆ ಹಾಕಿದರು. ಈ ವೇಳೆ ಸಿದ್ದರಾಮಯ್ಯ ಅಭಿಮಾನಿಗಳ ಮೇಲೆ ಪೊಲೀಸರು ಲಘು ಲಾಠಿಚಾರ್ಜ್ ನಡೆಸಿ, ಅವರ ವಾಹನ ಮುಂದಕ್ಕೆ ಹೋಗಲು ಅನುವು ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News