ಕೊಡಗಿನ ಪ್ರವಾಸಿತಾಣಗಳು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಿ ಜಿಲ್ಲಾಡಳಿತ ಆದೇಶ

Update: 2021-04-09 15:59 GMT

ಮಡಿಕೇರಿ, ಎ.9: ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಎ.3ರಿಂದ 20ರವರೆಗೆ ಕೊಡಗು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಿದ ಆದೇಶವನ್ನು ಜಿಲ್ಲಾಡಳಿತ ಸರಕಾರದ ಆದೇಶದಂತೆ ಹಿಂಪಡೆದಿದೆ. ಇಂದಿನಿಂದ ಎಲ್ಲಾ ಪ್ರವಾಸಿ ತಾಣಗಳಿಗೂ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶವನ್ನು ಮುಕ್ತಗೊಳಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ. 

ಪ್ರವಾಸಿ ತಾಣಗಳನ್ನು ಬಂದ್ ಮಾಡಿರುವ ಆದೇಶವನ್ನು ಹಿಂಪಡೆಯುವಂತೆ ಹೋಂಸ್ಟೇ ಮಾಲಕರ ಮತ್ತು ನೌಕರರ ಸಂಘ ಸೇರಿದಂತೆ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುತ್ತಿದ್ದವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಅನಿವಾರ್ಯವೆಂದು ಜಿಲ್ಲಾಡಳಿತ ಸ್ಪಷ್ಟಪಡಿಸಿತ್ತು.

ಇದೀಗ ಜಿಲ್ಲಾಧಿಕಾರಿಗಳ ನೂತನ ಆದೇಶದ ಪ್ರಕಾರ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳಾದ ದುಬಾರೆ, ಕಾವೇರಿ ನಿಸರ್ಗ ಧಾಮ, ಮಡಿಕೇರಿಯ ರಾಜಾಸೀಟು, ಮಾಂದಲ್ ಪಟ್ಟಿ, ಅಬ್ಬಿಫಾಲ್ಸ್, ಕೋಟೆ ಅಬ್ಬಿ, ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತ, ಇರ್ಪು, ಚೇಲಾವರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ತಾತ್ಕಾಲಿಕವಾಗಿ ಬಂದ್ ಆಗಿದ್ದ ಪ್ರವಾಸಿ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡವರು ನೂತನ ಆದೇಶದಿಂದ ಮತ್ತೆ ನಿಟ್ಟುಸಿರು ಬಿಡುವಂತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News