ಮೈಸೂರು: ಉಚಿತ ಕನ್ನಡ ಲೈಬ್ರರಿಗೆ ದುಷ್ಕರ್ಮಿಗಳಿಂದ ಬೆಂಕಿ; 11 ಸಾವಿರ ಕನ್ನಡ ಗ್ರಂಥಗಳು ಭಸ್ಮ

Update: 2021-04-09 17:07 GMT

ಮೈಸೂರು,ಎ.9: ಕನ್ನಡದ ಮೇಲೆ ಅಭಿಮಾನ ಹೊಂದಿ ಸುಮಾರು 11 ಸಾವಿರ ಕನ್ನಡದ ಗ್ರಂಥಗಳನ್ನು ಸಂಗ್ರಹಿಸಿ ಉಚಿತ ಲೈಬ್ರರಿ ನಡೆಸುತ್ತಿದ್ದ ಸೈಯದ್ ಎಂಬುವವರ ಶೆಡ್‍ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಇಡೀ ಅಂಗಡಿ ಸಮೇತ ಒಳಗಿದ್ದ ಪುಸ್ತಕಗಳೆಲ್ಲಾ ಸುಟ್ಟು ಕರಕಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ರಾಜೀವ್ ನಗರ ಎರಡನೇ ಹಂತದಲ್ಲಿರುವ ಆಟದ ಮೈದಾನದದ ಪಕ್ಕದ ಸರ್ಕಾರಿ ಜಾಗದಲ್ಲಿ ಸಣ್ಣದೊಂದು ಶೆಡ್ ನಿರ್ಮಿಸಿ ಇಲ್ಲಿನ ಸ್ಥಳೀಯ ನಿವಾಸಿ ಸೈಯದ್ ಎಂಬುವವರು ಕಳೆದ ಹತ್ತು ವರ್ಷಗಳಿಂದ ಕನ್ನಡ ಪುಸ್ತಕಗಳನ್ನೊಳಗೊಂಡ ಲೈಬ್ರರಿಯನ್ನು ನಡೆಸುತ್ತಿದ್ದರು. ಅವರಿವರ ಸಹಾಯದಿಂದ ಸುಮಾರು 11 ಸಾವಿರ ಗ್ರಂಥಗಳನ್ನು ಸಂಪಾದಿಸಿ ಸಾರ್ವಜನಿಕರಿಗೆ ಉಚಿತವಾಗಿ ಓದಲು ವ್ಯವಸ್ಥೆ ಮಾಡಿದ್ದರು.

ಗುರುವಾರ ತಡರಾತ್ರಿ ಈ ಉಚಿತ ಲೈಬ್ರರಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮ ಇಲ್ಲಿನ ಪುಸ್ತಕಗಳು ಸುಟ್ಟು ಕರಕಲಾಗಿವೆ. ವಿಷಯ ತಿಳಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದರಾದರೂ ಎಲ್ಲಾ ಪುಸ್ತಕಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಈ ಸಂಬಂಧ ಉದಯಗಿರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

'ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ನನ್ನ ಉಸಿರಿರುವವರೆಗೂ ನಾನು ಕನ್ನಡಕ್ಕಾಗಿ ಪ್ರಾಣವನ್ನೇ ಕೊಡುತ್ತೇನೆ. ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾನು ಕನ್ನಡ ಪುಸ್ತಕಗಳನ್ನು ಸಂಗ್ರಹಿಸಿ ಉಚಿತವಾಗಿ ಸಾರ್ವಜನಿಕರು ಓದಲು ಅವಕಾಶ ಕಲ್ಪಿಸಿದ್ದೆ. ನನ್ನ ಕನ್ನಡ ಅಭಿಮಾನ ಕಂಡ ಕನ್ನಡ ವಿರೋಧಿಗಳು ಈ ಹಿಂದೆ ಮೂರು ಬಾರಿ ನನ್ನ ಅಂಗಡಿ ಮೇಲೆ ದಾಳಿ ನಡೆಸಿದ್ದರು. ಆದರೆ ಇಂದು ನನ್ನ ಜೀವವಾಗಿದ್ದ ಲೈಬ್ರರಿಗೆ ಬೆಂಕಿ ಹಚ್ಚಿದ್ದಾರೆ' ಎಂದು ಲೈಬ್ರರಿ ಮಾಲಕ ಸೈಯದ್ ಪತ್ರಿಕೆಯೊಂದಿಗೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News