ವಶಪಡಿಸಿಕೊಂಡಿದ್ದ ದಕ್ಷಿಣ ಕೊರಿಯದ ಹಡಗನ್ನು ಬಿಡುಗಡೆಗೊಳಿಸಿದ ಇರಾನ್

Update: 2021-04-09 18:32 GMT

ಸಿಯೋಲ್ (ದಕ್ಷಿಣ ಕೊರಿಯ), ಎ. 9: ತಾನು ವಶಪಡಿಸಿಕೊಂಡಿದ್ದ ದಕ್ಷಿಣ ಕೊರಿಯದ ಟ್ಯಾಂಕರ್ ಹಡಗು ಮತ್ತು ಹಡಗಿನ ಕ್ಯಾಪ್ಟನನ್ನು ಇರಾನ್ ಬಿಡುಗಡೆಗೊಳಿಸಿದೆ ಎಂದು ದಕ್ಷಿಣ ಕೊರಿಯದ ವಿದೇಶ ಸಚಿವಾಲಯ ತಿಳಿಸಿದೆ.

ಇರಾನ್‌ನ ಇಸ್ಲಾಮಿಕ್ ರೆವಲೂಶನರಿ ಗಾರ್ಡ್ ಕಾರ್ಪ್ಸ್ ದಕ್ಷಿಣ ಕೊರಿಯದ ‘ಹಾನ್‌ಕುಕ್ ಕೆಮಿ’ ಹಡಗು ಮತ್ತು ಅದರ ವಿವಿಧ ದೇಶಗಳ 20 ಸಿಬ್ಬಂದಿಯನ್ನು ಜನವರಿಯಲ್ಲಿ ವಶಪಡಿಸಿಕೊಂಡಿತ್ತು.

ಹಡಗನ್ನು ಬಂಧನದಿಂದ ಮುಕ್ತಗೊಳಿಸಲಾಗಿದೆ ಹಾಗೂ ಅದು ಇಂದು ಸುರಕ್ಷಿತವಾಗಿ ಇರಾನ್‌ನಿಂದ ಹೊರಟಿದೆ ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಹಡಗು 7,200 ಟನ್ ‘ತೈಲ ರಾಸಾಯನಿಕ ಉತ್ಪನ್ನ’ಗಳನ್ನು ಒಯ್ಯುತ್ತಿತ್ತು ಹಾಗೂ ಆ ಮೂಲಕ ಅದು ಪದೇ ಪದೇ ಸಾಗರ ಪರಿಸರ ಕಾನೂನುಗಳನ್ನು ಉಲ್ಲಂಘಿಸಿತ್ತು ಎಂದು ಹಡಗನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಇರಾನ್ ಹೇಳಿತ್ತು.

 ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ಅಮೆರಿಕ ವಿಧಿಸಿರುವ ದಿಗ್ಬಂಧನಗಳಿಗೆ ಅನುಸಾರವಾಗಿ, ಬಿಲಿಯಗಟ್ಟಳೆ ಡಾಲರ್ ವೌಲ್ಯದ ಇರಾನ್‌ನ ಸೊತ್ತುಗಳನ್ನು ದಕ್ಷಿಣ ಕೊರಿಯ ಮುಟ್ಟುಗೋಲು ಹಾಕಿಕೊಂಡಿತ್ತು. ಹೀಗೆ ಮುಟ್ಟುಗೋಲು ಹಾಕಲಾದ ಸೊತ್ತುಗಳನ್ನು ಬಿಡುಗಡೆ ಮಾಡಬೇಕು ಎಂಬುದಾಗಿ ಇರಾನ್ ದಕ್ಷಿಣ ಕೊರಿಯವನ್ನು ಒತ್ತಾಯಿಸಿತ್ತು.

ಅದರ ನಂತರ ಇರಾನ್ ದಕ್ಷಿಣ ಕೊರಿಯದ ಹಡಗನ್ನು ವಶಪಡಿಸಿಕೊಂಡಿತ್ತು. ಕ್ಯಾಪ್ಟನನ್ನು ಹೊರತುಪಡಿಸಿ ಉಳಿದ ನಾವಿಕರನ್ನು ಇರಾನ್ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿತ್ತು.

ಈಗ, ಮುಟ್ಟುಗೋಲಿಗೆ ಒಳಗಾದ ಸೊತ್ತುಗಳನ್ನು ಬಿಡುಗಡೆ ಮಾಡಲು ಉಭಯ ದೇಶಗಳ ನಡುವೆ ಒಪ್ಪಂದ ನಡೆದಿದೆಯೇ ಎನ್ನುವುದು ಗೊತ್ತಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News