‘ನಾಡೋಜ’ ಗೌರವಕ್ಕೇ ಅಗೌರವ!

Update: 2021-04-10 06:04 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ವಿಶ್ವವಿದ್ಯಾನಿಲಯಗಳನ್ನು ಜ್ಞಾನದ ದೇಗುಲ ಎಂದು ಕರೆಯುತ್ತಾ ಬಂದಿದ್ದೇವೆ. ಅವುಗಳು ಈ ದೇಶಕ್ಕೆ ಲಕ್ಷಾಂತರ ಸಾಧಕರನ್ನು ನೀಡಿವೆ. ವಿಜ್ಞಾನಿಗಳು, ಸಾಹಿತಿಗಳು, ಚಿಂತಕರು, ರಾಜಕಾರಣಿಗಳು ಈ ಆಲಯಗಳಲ್ಲಿ ರೂಪುಗೊಂಡವರು. ಆದರೆ ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾನಿಲಯಗಳು ತಪ್ಪು ಕಾರಣಗಳಿಗಾಗಿ ಸುದ್ದಿಯಾಗುತ್ತಿವೆ. ವಿಶ್ವವಿದ್ಯಾನಿಲಯಗಳಲ್ಲಿ ಸ್ವಜನಪಕ್ಷಪಾತಿ ರಾಜಕಾರಣಿಗಳ ಹಸ್ತಕ್ಷೇಪ ಹೆಚ್ಚುತ್ತಿದ್ದಂತೆಯೇ ಅವುಗಳು ಜಾತೀವಾದ, ಭ್ರಷ್ಟಾಚಾರ ಮೊದಲಾದ ಕಾರಣಗಳಿಗಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ. ರಾಜಕಾರಣಿಗಳಿಂದ ವಿಶ್ವವಿದ್ಯಾನಿಲಯವೊಂದು ನಿಯಂತ್ರಿಸಲ್ಪಟ್ಟರೆ ಅದರ ಪರಿಣಾಮವೇನಾಗಬಹುದು ಎನ್ನುವುದಕ್ಕೆ ರೋಹಿತ್ ವೇಮುಲಾ ಆತ್ಮಹತ್ಯೆ ಉದಾಹರಣೆಯಾಗಿ ನಮ್ಮ ಮುಂದಿದೆ. ಉಪಕುಲಪತಿಗಳು ರಾಜಕಾರಣಿಗಳ ಚೇಲಾ ಆಗಿ, ವಿದ್ಯಾರ್ಥಿಗಳ ಮೇಲೆ ಜಾತಿಯ ಹೆಸರಿನಲ್ಲಿ ನಡೆಸಿದ ದೌರ್ಜನ್ಯ, ಅಂತಿಮವಾಗಿ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆಗೆ ಕಾರಣವಾಯಿತು. ಇದು ದೇಶಾದ್ಯಂತ ವಿದ್ಯಾರ್ಥಿ ಚಳವಳಿಯೊಂದನ್ನು ಹುಟ್ಟು ಹಾಕಿತು. ಇದೇ ಸಂದರ್ಭದಲ್ಲಿ ಜೆಎನ್‌ಯುನಂತಹ ವಿಶ್ವವಿದ್ಯಾನಿಲಯಗಳ ಮೇಲೆ ಹಿಡಿತ ಸಾಧಿಸಲು ಸರಕಾರ ನಡೆಸಿದ ಪ್ರಯತ್ನ ವಿಫಲವಾದಾಗ ಏನೇನು ಸಂಭವಿಸಿತು ಎನ್ನುವುದನ್ನೂ ನಾವು ನೋಡುತ್ತಿದ್ದೇವೆ. ಒಂದೆಡೆ ರಾಜಕೀಯ ಹಸ್ತಕ್ಷೇಪಗಳಿಂದಾಗಿ ವಿಶ್ವವಿದ್ಯಾನಿಲಯಗಳು ಹಳ್ಳ ಹಿಡಿಯುತ್ತಿದ್ದರೆ, ಇನ್ನೊಂದೆಡೆ, ಹಸ್ತಕ್ಷೇಪಕ್ಕೆ ಸಹಕರಿಸದ ವಿಶ್ವವಿದ್ಯಾನಿಲಯಗಳನ್ನು ನಾಶ ಮಾಡಲು ಸರಕಾರವೇ ದೊಣ್ಣೆ ಹಿಡಿದು ನಿಂತಿದೆ. ದೇಶಕ್ಕೆ ಹಲವು ಮಹಾನ್ ನಾಯಕರನ್ನು ನೀಡಿದ ಜೆಎನ್‌ಯುನಂತಹ ಸಂಸ್ಥೆಯನ್ನು ಇಂದು ‘ದೇಶದ್ರೋಹ’ದ ಆರೋಪದಲ್ಲಿ ಮಟ್ಟ ಹಾಕಲು ಸರಕಾರವೇ ಯತ್ನಿಸುತ್ತಿದೆ.

 ವಿಶ್ವವಿದ್ಯಾನಿಲಯಗಳ ಕೆಲಸ ಆಳುವವರ, ಶ್ರೀಮಂತರ ಜೀತ ಮಾಡುವುದಲ್ಲ, ಬದಲಿಗೆ ಆಳುವವರ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಬಿತ್ತುವುದು. ವಿಶ್ವವಿದ್ಯಾನಿಲಯಗಳ ನೇತೃತ್ವವನ್ನು ವಹಿಸಿದ ಕುಲಪತಿಯೊಬ್ಬ ಯಾವುದೇ ರಾಜಕಾರಣಿಯ ಶಿಫಾರಸಿನಿಂದ ಆಯ್ಕೆಯಾಗಿರಲಿ, ಆ ಸ್ಥಾನದಲ್ಲಿರುವವರೆಗೆ ಅದರ ಘನತೆಯನ್ನು ಕಾಪಾಡುವುದು ಆತನ ಕರ್ತವ್ಯವಾಗಿದೆ. ಆದರೆ ದುರದೃಷ್ಟವಶಾತ್, ವಿಶ್ವವಿದ್ಯಾನಿಲಯಗಳನ್ನು ಹಂತಹಂತವಾಗಿ ಸಾಯಿಸುವ ಸಂಚು ಸರಕಾರದಿಂದಲೇ ನಡೆಯುತ್ತಿದೆಯೇನೋ ಎಂಬ ಶಂಕೆ ಜನಸಾಮಾನ್ಯರಲ್ಲಿ ಹುಟ್ಟುತ್ತಿದೆ. ಒಂದು ಕಾಲದಲ್ಲಿ ವಿಶ್ವವಿದ್ಯಾನಿಲಯಗಳೊಳಗೆ ಇರುವ ಚಿಂತಕರ ಮುಂದೆ ಕಣ್ಣು ಕೊಟ್ಟು ಮಾತನಾಡಲು ರಾಜಕಾರಣಿಗಳು ಅಂಜುವಂತಹ ಪರಿಸ್ಥಿತಿ ಇತ್ತು. ಆದರೆ ಇಂದು, ವಿಶ್ವವಿದ್ಯಾನಿಲಯದೊಳಗಿರುವ ಮುಖ್ಯಸ್ಥರೇ ರಾಜಕಾರಣಿಗಳನ್ನು ಓಲೈಸುವುದಕ್ಕೆ, ಅವರ ಜೀತ ಮಾಡುವುದಕ್ಕೆ ತಾಮುಂದು, ನಾಮುಂದು ಎಂದು ಧಾವಿಸುತ್ತಿದ್ದಾರೆ. ಇತ್ತೀಚೆಗೆ ಉಪನ್ಯಾಸಕನೊಬ್ಬ ಉಪಕುಲಪತಿ ಹುದ್ದೆಗಾಗಿ ರೌಡಿಶೀಟರ್‌ಗೆ ಲಂಚ ನೀಡಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಒಂದು ವೇಳೆ ಈ ರೌಡಿ ಶೀಟರ್‌ನ ಶಿಫಾರಸಿನಿಂದ ಆ ಉಪನ್ಯಾಸಕನೇನಾದರೂ ಉಪಕುಲಪತಿಯಾಗಿದ್ದರೆ ಪರಿಸ್ಥಿತಿ ಏನಾಗಿ ಬಿಡುತ್ತಿತ್ತು? ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಆ ವಿಶ್ವವಿದ್ಯಾನಿಲಯದಿಂದ ರೌಡಿಶೀಟರ್‌ಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಿ ಬಿಡುತ್ತಿತ್ತು.

  ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿಯನ್ನು ಓರ್ವ ಉದ್ಯಮಿಗೆ ನೀಡಿ ನಗೆಪಾಟಲಿಗೀಡಾಗಿದೆ. ಇದರ ವಿರುದ್ಧ ಈಗಾಗಲೇ ಸಾಹಿತಿಗಳು, ಚಿಂತಕರು, ಉಪನ್ಯಾಸಕರು ತಮ್ಮ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಆದಿಕವಿ ಪಂಪನಿಗೆ ನೀಡಿದ ಗೌರವವಾಗಿದೆ ‘ನಾಡೋಜ’. ಆ ಹೆಸರಿನಲ್ಲಿ ಹಂಪಿ ವಿಶ್ವವಿದ್ಯಾನಿಲಯ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸಲು ಆರಂಭಿಸಿದಾಗ ಜನರಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದವು. ರಾಷ್ಟ್ರ ಕವಿ ರವೀಂದ್ರ ನಾಥ ಠಾಗೋರ್ ಅವರ ಶಾಂತಿನಿಕೇತನ ‘ದೇಶಿಕೋತ್ತಮ’ ಎಂಬ ಪದವಿಯನ್ನು ನೀಡುತ್ತಾ ಬರುತ್ತಿದೆ. ಅದನ್ನೇ ಮಾದರಿಯಾಗಿಟ್ಟುಕೊಂಡು ವಿವಿಯು ನಾಡೋಜ ಗೌರವ ಪದವಿಯನ್ನು ನೀಡುವ ಸಂಪ್ರದಾಯವೊಂದನ್ನು ಆರಂಭಿಸಿತ್ತು. 1995ರಲ್ಲಿ ಮೊದಲಬಾರಿ ಕುವೆಂಪು ಅವರಿಗೆ ಈ ಪದವಿಯನ್ನು ನೀಡಲಾಗಿತ್ತು. ಆ ಬಳಿಕ, ನಿಜಲಿಂಗಪ್ಪ, ಗಂಗೂಬಾಯಿ ಹಾನಗಲ್, ಶಿವರಾಮ ಕಾರಂತ, ಪಾಟೀಲ ಪುಟ್ಟಪ್ಪ, ಎಚ್.ಕೆ. ಕರೀಂಖಾನ್, ಡಾ. ಬಿ. ಶೇಕ್ ಅಲಿ, ಡಾ. ರಾಜ್‌ಕುಮಾರ್, ಯು. ಆರ್. ಅನಂತಮೂರ್ತಿ, ಬರಗೂರು ರಾಮಚಂದ್ರಪ್ಪ, ನಿಸಾರ್ ಅಹ್ಮದ್‌ರಂತಹ ಹಲವು ಗಣ್ಯರು ಈ ಪದವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಈ ಬಾರಿ ಓರ್ವ ಉದ್ಯಮಿಯನ್ನು ಆಯ್ಕೆ ಮಾಡಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಈ ಪ್ರಶಸ್ತಿ ಬಿಕರಿಯಾಗಿದೆ ಎಂದು ಚಿಂತಕರು ಆರೋಪಿಸುತ್ತಿದ್ದಾರೆ. ನಿಜಕ್ಕೂ ಈ ಆಯ್ಕೆಯನ್ನು ವಿಶ್ವವಿದ್ಯಾನಿಲಯ ಮಾಡಿದೆಯೋ ಅಥವಾ ಸರಕಾರವೇ ಒತ್ತಡ ಹಾಕಿ ಈ ಪದವಿಯನ್ನು ಕೊಡಿಸಿದೆಯೋ ಎನ್ನುವುದು ಚರ್ಚೆಯಲ್ಲಿದೆ.

  ಒಂದು ಅತ್ಯುನ್ನತ ಪದವಿಯನ್ನು ಏಕಾಏಕಿ ರಾಜಕೀಯ ಮತ್ತು ಇನ್ನಿತರ ಕಾರಣಗಳಿಂದ ಅನರ್ಹರಿಗೆ ನೀಡಿದಾಕ್ಷಣ ಆ ಪದವಿಯ ಘನತೆ ಇಲ್ಲವಾಯಿತು ಮಾತ್ರವಲ್ಲ, ಈ ಹಿಂದೆ ಯಾರೆಲ್ಲ ಅರ್ಹ ಸಾಧಕರು ಆ ಪದವಿಯನ್ನು ತಮ್ಮದಾಗಿಸಿಕೊಂಡಿದ್ದರೋ ಅವರನ್ನು ಅವಮಾನ ಮಾಡಿದಂತಾಯಿತು. ಆ ಸಾಧಕರನ್ನೂ, ಈ ಅನರ್ಹ ಅಭ್ಯರ್ಥಿಯನ್ನೂ ವಿಶ್ವವಿದ್ಯಾನಿಲಯ ಒಂದೇ ತಕ್ಕಡಿಯಲ್ಲಿಟ್ಟರೆ, ವಿದ್ಯಾರ್ಥಿಯೊಬ್ಬ ಅದನ್ನು ಹೇಗೆ ಸ್ವೀಕರಿಸಬೇಕು? ಒಬ್ಬ ರಾಜಕೀಯ ಹಿನ್ನೆಲೆ ಇರುವ, ಮೈಮೇಲೆ ಹತ್ತು ಹಲವು ಕ್ರಿಮಿನಲ್‌ಪ್ರಕರಣಗಳಿರುವ ವ್ಯಕ್ತಿಯ ಜೊತೆಗೆ ಹಿರಿಯ ಚಿಂತಕರೊಬ್ಬರನ್ನು ನಿಲ್ಲಿಸಿ ಅವರಿಬ್ಬರಿಗೂ ಗೌರವ ಡಾಕ್ಟರೇಟ್ ಕೊಟ್ಟರೆ ಪರೋಕ್ಷವಾಗಿ ಚಿಂತಕನ ಸ್ಥಾನವನ್ನು ರಾಜಕಾರಣಿಯ ಮಟ್ಟಕ್ಕೆ ಇಳಿಸಿದಂತೆಯೇ ಅಲ್ಲವೇ? ಹಂಪಿ ವಿವಿ ನಾಡೋಜ ಪ್ರಶಸ್ತಿಯನ್ನು ಒಬ್ಬ ಉದ್ಯಮಿಗೆ ನೀಡುವ ಮೂಲಕ ಡಾ. ರಾಜ್‌ಕುಮಾರ್, ಕುವೆಂಪು, ಪಾಟೀಲ ಪುಟ್ಟಪ್ಪ, ನಿಜಲಿಂಗಪ್ಪರಂತಹ ನಾಯಕರನ್ನು ಅವಮಾನಿಸಿತು ಎಂದೇ ಭಾವಿಸಬೇಕಾಗುತ್ತದೆ. ಇದರ ಬದಲಿಗೆ, ಈ ನಾಡಿನಲ್ಲಿ ಕೃಷಿ ಕ್ರಾಂತಿ ಮಾಡಿದ ಒಬ್ಬ ಅತ್ಯುತ್ತಮ ರೈತನನ್ನು ಗುರುತಿಸಿ ಅವನಿಗೆ ಈ ಪ್ರಶಸ್ತಿಯನ್ನು ನೀಡಿದ್ದರೆ, ನಿಜಕ್ಕೂ ಅದರ ಘನತೆ ಹೆಚ್ಚಾಗುತ್ತಿತ್ತು. ಘನತೆ ಕಳೆದುಕೊಂಡ ಈ ಪ್ರಶಸ್ತಿಯನ್ನು ಮುಂದಿನ ದಿನಗಳಲ್ಲಿ ಸ್ವೀಕರಿಸಲು ಅರ್ಹ ಸಾಧಕರು ಮುಂದೆ ಬರುವುದೇ ಅನುಮಾನ.

 ನಾಡೋಜ ಎಂದಲ್ಲ, ವಿಶ್ವವಿದ್ಯಾನಿಲಯಗಳು ನೀಡುವ ಡಾಕ್ಟರೇಟ್, ಗೌರವ ಡಾಕ್ಟರೇಟ್ ಇತ್ಯಾದಿಗಳೆಲ್ಲ ಇತ್ತೀಚಿನ ದಿನಗಳಲ್ಲಿ ಮಾರಾಟವಾಗುತ್ತಿವೆ. ರಾಜಕಾರಣಿಗಳಿಂದ ಅಥವಾ ಅವರ ಹಿಂಬಾಲಕರ ಶಿಫಾರಸುಗಳಿಂದ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸಿದ ಕುಲಪತಿಗಳು, ಪ್ರೊಫೆಸರ್‌ಗಳು ತಮ್ಮ ನಾಯಕರ ಋಣಭಾರ ತೀರಿಸಲು ಕಾಯುತ್ತಿರುತ್ತಾರೆ. ರಾಜಕಾರಣಿಗಳು ಕಾಲಲ್ಲಿ ತೋರಿಸಿದ್ದನ್ನು ತಲೆಬಾಗಿ ಮಾಡಿ ಧನ್ಯರಾಗುವವರ ಸಂಖ್ಯೆ ವಿಶ್ವವಿದ್ಯಾನಿಲಯದೊಳಗೆ ಹೆಚ್ಚುತ್ತಿವೆ. ದೇಶದ ಪಾಲಿನ ಬಹುದೊಡ್ಡ ದುರಂತ ಇದಾಗಿದೆ. ಈ ದೇಶದ ಭವಿಷ್ಯವನ್ನು ಕೈ ಹಿಡಿದು ಮುನ್ನಡೆಸಬೇಕಾಗಿದ್ದ ವಿಶ್ವವಿದ್ಯಾನಿಲಯಗಳೇ ದಾರಿ ತಪ್ಪಿದರೆ, ರಾಜಕಾರಣಿಗಳು ಮತ್ತು ಭ್ರಷ್ಟ ವ್ಯ ವಸ್ಥೆಯ ವಿರುದ್ಧ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸಬೇಕಾದ ಗುರುವೃಂದವೇ ಭ್ರಷ್ಟರೂ, ಜಾತೀವಾದಿಗಳೂ ಆದರೆ ಉಳಿಗಾಲವೆಲ್ಲಿ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News