ಬೇಡಿಕೆ ಈಡೇರಿಸದಿದ್ದರೆ ಎಲ್ಲಾ ನೌಕರರಿಗೆ ದಯಾಮರಣಕ್ಕೆ ಅನುಮತಿ ನೀಡಿ: ಸಾರಿಗೆ ನೌಕರರ ಮನವಿ

Update: 2021-04-10 14:17 GMT

ಚಿಕ್ಕಮಗಳೂರು, ಎ.10: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ನಗರದ ಗಾಂಧಿ ಪಾರ್ಕ್ ಆವರಣದಲ್ಲಿ ಕಳೆದ 3 ದಿನಗಳಿಂದ ಧರಣಿ ನಡೆಸುತ್ತಿರುವ ನೌಕರರು ಶನಿವಾರವೂ ಧರಣಿ ಮುಂದುವರಿಸಿದ್ದಾರೆ. ರಾಜ್ಯ ಸರಕಾರ ನೌಕರರಿಗೆ ಬೆದರಿಕೆ ಹಾಕುವುದನ್ನು ಬಿಟ್ಟು, ಕೂಡನೇ 6ನೇ ವೇತನ ಆಯೋಗವನ್ನು ಜಾರಿ ಮಾಡಬೇಕು. ಬೇಡಿಕೆ ಈಡೇರಿಸಲು ಆಗದಿದ್ದಲ್ಲಿ ಎಲ್ಲ ನೌಕರರಿಗೆ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಕಣ್ಣೀರಿಟ್ಟಿದ್ದಾರೆ.

ಶನಿವಾರ ನಗರದ ಗಾಂಧಿ ಪಾರ್ಕ್ ಆವರಣದಲ್ಲಿ ನೌಕರರ ಕುಟುಂಬಸ್ಥರೊಂದಿಗೆ ಪ್ರತಿಭಟನೆ ನಡೆಸಿದ ಸಂದರ್ಭ ನೌಕರರ ಕೂಟದ ಮುಖಂಡರು ಮಾತನಾಡಿ, ರಾಜ್ಯ ಸರಕಾರ ನೌಕರರ ಬೇಡಿಕೆಗಳನ್ನು ಈಡೇರಿಸುವುದನ್ನು ಬಿಟ್ಟು, ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗಿಯಾಗಿರುವ ಕೆಲ ನೌಕರರನ್ನು ವರ್ಗಾವಣೆ ಮಾಡುವ ಮೂಲದ ಹೆದರಿಸಲು ಮುಂದಾಗಿದೆ. ಈ ಮೂಲಕ ನೌಕರರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸರಕಾರದ ಇಂತಹ ಗೊಡ್ಡು ಬೆದರಿಕಗೆ ನಾವು ಜಗ್ಗುವುದಿಲ್ಲ, 6ನೇ ವೇತನ ಆಯೋಗ ಜಾರಿಯಾಗುವವರೆಗೂ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಎಸ್ಸಾರ್ಟಿಸಿ ಸಂಸ್ಥೆಯ ನೌಕರರೂ ಮನುಷ್ಯರೇ, ಕಡಿಮೆ ವೇತನಕ್ಕೆ ದಿನದಲ್ಲಿ 10ರಿಂದ 15ಗಂಟೆಗಳ ಕಾಲ ಕೆಲಸ ನಿರ್ವಹಿಸುತ್ತಿದ್ದೇವೆ. ಸಂಸ್ಥೆ ನೀಡುವ ಅಲ್ಪ ವೇತನದಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ, ಒಂದು ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಭಾರೀ ಕಷ್ಟದ ಜೀವನ ನಡೆಸುತ್ತಿದ್ದೇವೆ. ನೌಕರರ ಕಟುಂಬಗಳು ಬೀದಿಗೆ ಬಂದಿವೆ. ರಾಜ್ಯ ಸರಕಾರ ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇದಾಗದಿದ್ದಲ್ಲಿ ಮುಷ್ಕರ ಮಾಡುತ್ತಿರುವ ನೌಕರರಿಗೆ ವಿಷ ನೀಡಬೇಕು. ಇಲ್ಲವೇ ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಬೇಸರ ವ್ಯಕ್ತಪಡಿಸಿದರು.

ನೌಕರರ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಸರಕಾರ ಕೆಲ ನೌಕರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕೆಲವು ನೌಕರರನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಇದೆಲ್ಲವನ್ನು ಜನರು ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಸರಕಾರಕ್ಕೆ ತಕ್ಕಪಾಠವನ್ನು ಕಲಿಸುತ್ತಾರೆ ಎಂದು ಇದೇ ವೇಳೆ ಮುಷ್ಕರ ನಿರತ ನೌಕರರು ಅಸಮಾಧಾನ ಹೊರಹಾಕಿದರು.

ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ನೌಕರರನ್ನು ಸಂಸ್ಥೆ ಎಂದೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿರಲಿಲ್ಲ, ಆದರೆ ಇದೇ ಮೊದಲ ಬಾರಿಗೆ ಮಹಿಳಾ ನೌಕರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದು ದುರದೃಷ್ಟಕರ. ನಾವು ಐಷರಾಮಿ ಜೀವನ ನಡೆಸಲು ವೇತನ ನೀಡಿ ಎಂದು ಕೇಳುತ್ತಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ, ಕುಟುಂಬ ನಿರ್ವಹಣೆಗಾಗುವಷ್ಟು ಉತ್ತಮ ವೇತನವನ್ನು ಹೆಚ್ಚಳ ಮಾಡಿ ಎಂದು ಕೇಳುತ್ತಿದ್ದೇವೆ ಎಂದರು.

ನೌಕರರಿಗೆ 6ನೇ ವೇತನ ಆಯೋಗ ಜಾರಿ ಮಾಡಿ ಎಂದರೆ ಸರಕಾರ ಚುನಾವಣೆ ನೀತಿ ಸಂಹಿತೆಯ ಕುಂಟು ನೆಪ ಹೇಳುತ್ತಿದೆ. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ನೌಕರರನ್ನು ವರ್ಗಾವಣೆ ಮಾಡಲು ನೀತಿ ಸಂಹಿತೆ ಅಡ್ಡಿಯಾವುದಿಲ್ಲವೇ ಎಂದು ಪ್ರಶ್ನಿಸಿದ ನೌಕರರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಜೀವನದಲ್ಲಿ ಅನೇಕ ಹೋರಾಟಗಳನ್ನು ಮಾಡಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ನಮ್ಮ ನೋವುಗಳು ಅವರಿಗೆ ಅರ್ಥವಾಗುತ್ತದೆ ಎಂದುಕೊಂಡಿದ್ದೇವೆ. ಸರಕಾರ ತಕ್ಷಣ ರಸ್ತೆಸಾರಿಗೆ ನೌಕರರ ಹಿತ ಕಾಯಲು ಮುಂದಾಗಬೇಕೆಂದು ಮನವಿ ಮಾಡಿದರು.

ಧರಣಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೂಟದ ಜಿಲ್ಲಾಧ್ಯಕ್ಷ ಪ್ರಸನ್ನ, ಕಾಂಗ್ರೆಸ್ ಮುಖಂಡ ರವೀಶ್ ಕ್ಯಾತನಬೀಡು, ರಾಜು, ದಲಿತ ಸಂಘರ್ಷ ಸಮಿತಿ ಮುಖಂಡ ಮೋಹನ್ ಕುಮಾರ್ ಸೇರಿದಂತೆ ಕೆಎಸ್ಸಾರ್ಟಿಸಿ ಸಂಸ್ಥೆಯ ನೂರಾರು ನೌಕರರು ಹಾಗೂ ನೌಕರರ ಕುಟುಂಬಸ್ಥರು ಉಪಸ್ಥಿತರಿದ್ದರು.

ಕಣ್ಣೀರು: ಗಾಂಧಿ ಪಾರ್ಕ್ ಆವರಣದಲ್ಲಿ ನೌಕರರು ಧರಣಿ ನಡೆಸುತ್ತಿದ್ದ ವೇಳೆ ಕೆಎಸ್ಸಾರ್ಟಿಸಿ ಸಿಬ್ಬಂದಿಯೊಬ್ಬರು ಮಾತನಾಡುತ್ತಾ, ಪ್ರತಿಭಟನೆಯಲ್ಲಿ ಭಾಗಿಯಾದವರನ್ನು ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ನನ್ನ ತಲೆದಂಡವಾದರೂ ಚಿಂತೆಯಿಲ್ಲ, ನಿಮ್ಮೆಲ್ಲರೊಂದಿಗೆ ನಾನಿರುತ್ತೇನೆ. ನಮ್ಮ ಬೇಡಿಕೆ ಈಡೇರದ ಹೊರತು ಕೆಲಸಕ್ಕೆ ಹಿಂದಿರುಗುವುದಿಲ್ಲ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News